ಕಾಂತಾರ ಚಲನ ಚಿತ್ರದಲ್ಲಿ ತುಳುನಾಡಿನ ದೈವಾರಾಧನೆಯ ಬಳಕೆ ಕ್ರಮದಿಂದ ನೋವು: ಸುಳ್ಯ ತಾಲೂಕು ಅಜಿಲ ಯಾನೆ ನಲಿಕೆ ಸಮಾಜ ಸೇವಾ ಸಂಘ,ನಿರ್ದಿಷ್ಟ ಸಮುದಾಯ ಹಾಗೂ ಆಯಾಯ ಸ್ಥಳದಲ್ಲಿ ಮಾತ್ರ ದೈವದ ನೃತ್ಯಕ್ಕೆ ಅವಕಾಶ ಕೊಡುವಂತೆ ಆಗ್ರಹಿಸಿ ಸಚಿವರಿಗೆ ಮತ್ತು ತಹಶೀಲ್ದಾರರಿಗೆ ಮನವಿ

0

ತುಳುನಾಡಿನ ದೈವಾರಾಧನೆಯನ್ನು ಮನರಂಜನೆ ಉದ್ದೇಶದಿಂದ ಚಲನಚಿತ್ರದಲ್ಲಿ ಪ್ರಚಾರಪಡಿಸಿ ಇದೀಗ ದೈವದ ವೇಷ ಭೂಷಣಗಳನ್ನು ತೊಟ್ಟು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ, ಇನ್ನಿತರ ಕಾರ್ಯಕ್ರಮಗಳ ಮೆರವಣಿಗೆಯಲ್ಲಿ ಬಳಸಿಕೊಳ್ಳುತ್ತಿರುವುದು ಹಿಂದೂ ಸಂಪ್ರದಾಯಕ್ಕೆ ಅವಮಾನ ಮಾಡುವಂತ ಒಂದು ಸಂಗತಿಯಾಗಿದ್ದು ಇದನ್ನು ಸುಳ್ಯ ತಾಲೂಕು ಅಜಿಲ ಯಾನೆ ನಲಿಕೆ ಸಮಾಜ ಸೇವಾ ಸಂಘ ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಘದ ಅಧ್ಯಕ್ಷ ರೋಶನ್ ಸರಳಿಕುಂಜ ತಿಳಿಸಿದ್ದಾರೆ.

ಅವರು ತಮ್ಮ ಸಂಘದ ಸದಸ್ಯರೊಂದಿಗೆ ಸುಳ್ಯ ತಾಲೂಕು ಕಚೇರಿಯಲ್ಲಿ ಇಂದು ತಹಸೀಲ್ದಾರ್ ಕು. ಅನಿತಾ ಲಕ್ಷ್ಮಿ ಅವರಿಗೆ ಮನವಿಯನ್ನು ನೀಡಿ ಮಾತನಾಡಿ ‘ದೈವರಾದನೆಯ ಬಗ್ಗೆ ಏನು ತಿಳಿಯದೆ ರಿಷಬ್ ಶೆಟ್ಟಿಯವರ ಕಾಂತಾರ ಚಲನಚಿತ್ರದಲ್ಲಿ ತುಳುನಾಡಿನ ದೈವಾರಾಧನೆಯ
ದೃಶ್ಯವನ್ನು ಪ್ರದರ್ಶಿಸಿರುತ್ತಾರೆ.


ಸದ್ರಿ ತುಳುನಾಡಿನ ದೈವಾರಾಧನೆಯನ್ನು ಮನರಂಜನೆ ಉದ್ದೇಶದಿಂದ ಚಲನಚಿತ್ರದಲ್ಲಿ ಪ್ರಚಾರ ಪಡಿಸಿದ್ದು ದೈವಾರಾಧನೆಯ ಬಗ್ಗೆ ಯಾವುದೇ ಮಾಹಿತಿ ಹಾಗೂ ಅನುಭವವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಎಲ್ಲಾ ವರ್ಗದ
ಜನರು ದೈವಾರಾಧನೆಯ ಬಗ್ಗೆ ಏನೂ ತಿಳಿಯದೆ ಇತ್ತೀಚಿನ ದಿನಗಳಲ್ಲಿ ಪ್ರದರ್ಶಿಸುವುದರಿಂದ ನಮ್ಮ
ಸಂಘ ಹಾಗೂ ಸಮುದಾಯಕ್ಕೆ ತೀವ್ರ ನೋವು ತಂದಿದೆ ಎಂದು ಅವರು ಹೇಳಿದರು.


ಹಿಂದೂ ಸಂಪ್ರದಾಯದ ಪ್ರಕಾರ ತುಳುನಾಡಿನ ದೈವಾರಾಧನೆ ಹಾಗೂ ಭೂತಕೋಲ
ಸಂಪ್ರದಾಯಗಳು ತೀವ್ರ ಮಹತ್ವ ಹಾಗೂ ಪೂಜನೀಯವಾದಂತಹ ಒಂದು ಪದ್ಧತಿಯಾಗಿರುತ್ತದೆ.
ಸದ್ರಿ ಕಾರ್ಯಕ್ರಮಗಳಿಗೆ ಹಿಂದೂ ಧರ್ಮದಲ್ಲಿ ನಿರ್ಧಿಷ್ಟ ಸಮುದಾಯ ಹಾಗೂ ಆಯಾಯ
ಸ್ಥಳದಲ್ಲಿ ಈ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಹಾಗೂ ಈ ಬಗ್ಗೆ ತಿಳುವಳಿಕೆ ಹೊಂದಿದವರೇ
ಇದನ್ನು ಪ್ರದರ್ಶಿಸುತ್ತಾ ಬಂದಿರುತ್ತಾರೆ.


ಸದ್ರಿ ಕಾಂತಾರ ಚಲನಚಿತ್ರ ಬಿಡುಗಡೆಗೊಂಡ ನಂತರ
ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳು ಹಾಗೂ ಮಹಿಳೆಯರು ಈ ಬಗ್ಗೆ ತಿಳುವಳಿಕೆ ಇಲ್ಲದವರು
ದೈವಾರಾಧನೆ ನೃತ್ಯವನ್ನು ಮಾಡುತ್ತಾ ಬರುವುದು ಸರಿಯಲ್ಲ.
ಅದುದರಿಂದ ತಾವುಗಳು ಇನ್ನು ಮುಂದಕ್ಕೆ ಸಾರ್ವಜನಿಕ
ಸ್ಥಳಗಳಲ್ಲಿ
ದೈವದ ಸಿರಿ, ಗಗ್ಗರ ಇತರ ಪರಿಕರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಪಯೋಗಿಸುವುದು,ದೈವಗಳಿಗೆ ಸಂಬಂಧಿಸಿದ ಯಾವುದೇ ಚಲನಚಿತ್ರ ಪ್ರದರ್ಶನ ನಿರ್ಮಾಣಕ್ಕೆ ತಡೆ ನೀಡಿ,
ದೈವಗಳ ಪ್ರತಿರೂಪ ಪ್ರದರ್ಶನಕ್ಕೆ ಕಡಿವಾಣ ಹಾಕುವುದು ಮತ್ತು ಶಿಕ್ಷೆಗೆ ಗುರಿ ಪಡಿಸುವುದು.


ದೈವಗಳ ಸಂದಿ ವಾರ್ಧನ ದೈವಗಳ ಸನ್ನಿಧಿಯಲ್ಲಿ ಬಿಟ್ಟರೆ ಬೇರೆ ಎಲ್ಲೂ ಹೇಳುವಂತಾಗಬಾರದು.
ಆದುದರಿಂದ ತಾವುಗಳು ಈ ಬಗ್ಗೆ ಪರಿಶೀಲಿಸಿ ದೈವಾರಾಧನೆ ಹಾಗೂ ನೃತ್ಯ ಈ
ಹಿಂದಿನಂತೆ ನಿರ್ಧಿಷ್ಟ ಸಮುದಾಯ ಹಾಗೂ ಆಯಾಯ ಸ್ಥಳದಲ್ಲಿ ಮಾತ್ರ ನಡೆಯುವಂತೆ ಕ್ರಮ
ಕೈಗೊಂಡು ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಸಂಘದ ವತಿಯಿಂದ ಮನವಿಯನ್ನು ನೀಡಿ ವಿನಂತಿಸಿಕೊಂಡರು.
ಇದೇ ರೀತಿಯ ಮನವಿ ಪತ್ರವನ್ನು ಸಚಿವ ಅಂಗಾರವರಿಗೂ ನೀಡಿರುವುದಾಗಿ ಸಮಿತಿಯವರು ತಿಳಿಸಿದರು.


ಈ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ ಜಯರಾಮ ಬಾಳಿಲ, ಸದಸ್ಯರುಗಳಾದ ಅನಿಲ್ ಕುಮಾರ್ ಅಜಿಲ, ಶಿವರಾಮ ಅಜಿಲ, ಸುರೇಶ, ಜಯರಾಮ ಬೊಳಿಯಾಮಜಲು, ಬಾಬು ಅಜಿಲ ಆರಂಬೂರು, ವಿಜಿತ್ ಮಂಡೆಕೋಲು, ಕಿಟ್ಟು ಅಜಿಲ ಅಡ್ತಲೆ, ನಾಗೇಶ್ ಬಾಳಿಲ, ಸುದರ್ಶನ್, ಗೌತಮ್ ಅಡ್ತಲೆ, ಕಾಂತು ಬಾಳಿಲ ಮೊದಲಾದವರು ಉಪಸ್ಥಿತರಿದ್ದರು.


ಮನವಿ ಸ್ವೀಕರಿಸಿದ ಸುಳ್ಯ ತಹಶೀಲ್ದಾರ್ ಸಮಿತಿ ವತಿಯಿಂದ ನೀಡಿರುವ ಈ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.