ಬೆಳೆ ರಕ್ಷಣೆಗೆ ನೀಡಿರುವ ಕೋವಿಯನ್ನು ಚುನಾವಣಾ ಸಂದರ್ಭದಲ್ಲಿ ಡಿಪಾಸಿಟ್ ಇಡುವ ಕ್ರಮ‌ ಸರಿಯಲ್ಲ

0

ಕೃಷಿಕರಿಗೆ ವಿನಾಯಿತಿ ನೀಡಿ : ಪಿ.ಎಸ್.ಗಂಗಾಧರ್ ಮನವಿ

ಬೆಳೆ ರಕ್ಷಣೆಗಾಗಿ ಕೃಷಿಕರಿಗೆ ನೀಡಲಾಗಿರುವ ಕೋವಿಯನ್ನು ಚುನಾವಣೆ ಸಂದರ್ಭದಲ್ಲಿ ಡಿಪಾಸಿಟ್ ಇಡುವ ಕ್ರಮ ಸರಿಯಲ್ಲ. ಕೃಷಿಕರಿಗೆ ವಿನಾಯಿತಿ ನೀಡಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೃಷಿಕರೂ ಆಗಿರುವ ಪಿ.ಎಸ್.ಗಂಗಾಧರ್ ಜಿಲ್ಲಾಧಿಕಾರಿಗಳಿಗೆ ಮನವಿ‌ ಮಾಡಿಕೊಂಡಿದ್ದಾರೆ.

ದ. ಕ. ಜಿಲ್ಲೆಯ ಸುಳ್ಯ ತಾಲೂಕು ಸಂಪೂರ್ಣ ಮಲೆನಾಡು ಪ್ರದೇಶವಾಗಿದೆ. ಸುಮಾರು 75% ಜನರು ಕೃಷಿಕರಾಗಿದ್ದು ಅಡಿಕೆ, ತೆಂಗು, ಗೇರು, ರಬ್ಬರ್, ಕಾಳುಮೆಣಸು, ಕೊಕ್ಕೋ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿರುವುದಾಗಿದೆ. ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ವಿಪರೀತ ಹಾವಳಿ, ಮಂಗಗಳ ಉಪಟಳ ಇದ್ದು, ಕೃಷಿಕರಾದ ನಮಗೆ ಬೆಳೆಗಳನ್ನು ರಕ್ಷಿಸಲು ಕೋವಿ ಪರವಾನಿಗೆ ನೀಡಿರುವುದಾಗಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ಕೋವಿಯನ್ನು ಡಿಪಾಸಿಟ್ ಇಡುವಂತೆ ಪೊಲೀಸ್ ಇಲಾಖೆ ಜನರಿಗೆ ಒತ್ತಾಯಿಸುವುದು ಪ್ರತಿ ಚುನಾವಣಾ ಸಂದರ್ಭದಲ್ಲಿಯೂ ನಡೆಯುತ್ತಿರುತ್ತದೆ. ಚುನಾವಣಾ ಸಂದರ್ಭದಲ್ಲಿ ಕೋವಿಯಿಂದ ನಮ್ಮ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ.

ಆದುದರಿಂದ ಯಾವುದೇ ಕೇಸು, ವಗೈರೆ ಇಲ್ಲದ ಕೃಷಿಕರಿಗೆ ಇದರಿಂದ ವಿನಾಯಿತಿ ನೀಡಬೇಕಾಗಿ ನಮ್ಮ ಕೋರಿಕೆಯಾಗಿದೆ. ಈ ಹಿಂದೆಯೂ ಕೃಷಿಕರು ಅರ್ಜಿ ನೀಡಿ ವಿನಾಯಿತಿ ಕೇಳಿದವರಿಗೆ ಅವಕಾಶ ನೀಡಲಾಗಿತ್ತು. ಆದರೆ ತಾವು ಜನಸ್ನೇಹಿ ಅಧಿಕಾರಿಯಾಗಿದ್ದು, ಕೃಷಿಕರ ಭವಣೆಯನ್ನು ಅರಿತು, ಯಾವುದೇ ಕ್ರಿಮಿನಲ್ ಹಿನ್ನಲೆ, ಕೇಸು ಇಲ್ಲದವರಿಗೆ ವಿನಾಯಿತಿ ನೀಡಬೇಕಾಗಿ ಈ ಮೂಲಕ ವಿನಂತಿಸುತ್ತೇವೆ ಎಂದು‌ ಮನವಿಯಲ್ಲಿ ತಿಳಿಸಿದ್ದಾರೆ.