ಸುಳ್ಯ: ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ

0

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವ-ಉದ್ಯೋಗ, ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ಮಾ. 26ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವ ಎಸ್. ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ತ್ರಿಚಕ್ರ ವಾಹನ ಮತ್ತು ಮೀನು ಖರೀದಿ ಅಪ್ಲಿಕೇಶನ್ ನ್ನು ಉದ್ಘಾಟಿಸಿ ಮಾತನಾಡುತ್ತಾ ತರಾತುರಿಯ ಕಾರ್ಯಕ್ರಮ ಆದರೂ ಇದೊಂದು ಸರಕಾರದ ಸಾಧನೆ. ಪ್ರಾಯೋಗಿಕವಾಗಿ ಲೋಕಾರ್ಪಣೆಯಾಗಿದೆ. ಕಾರ್ಮಿಕರು ಆರ್ಥಿಕವಾಗಿ ಮೇಲಕ್ಕೆ ಬರಬೇಕೆನ್ನುವ ಪರಿಕಲ್ಪನೆಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ನನಗೆ ಮೀನುಗಾರಿಕಾ ಸಚಿವ ಸ್ಥಾನವನ್ನು ಕೊಡುವಾಗ ಹಲವರು ವ್ಯಂಗ ಮಾಡಿದ್ದು ಉಂಟು. ಆದರೆ ನನ್ನ ಹಿರಿಯರಿಂದ ಬಂದ ಅನುಭವ, ಕೂಲಿ ಕಾರ್ಮಿಕನಾಗಿ ದುಡಿದ ಅನುಭವ ನನಗೆ ನನ್ನ ಕರ್ತವ್ಯವನ್ನು ನಿರ್ವಹಿಸುವ ಧೈರ್ಯ ತುಂಬಿತು. ಮೀನು ಮನುಷ್ಯನಿಗೆ ಪೌಷ್ಟಿಕಾಂಶ ಆಹಾರವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ತುಂಬುತ್ತದೆ. ಆ ನಿಟ್ಟಿನಲ್ಲಿ ಗ್ರಾಹಕರಿಗೆ ತಾಜಾ ಮೀನು ದೊರೆಯಬೇಂಕ ಉದ್ದೇಶದಿಂದ ಈ ಯೋಜನೆಯನ್ನು ಮಾಡಲಾಗಿದೆ ಎಂದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಮಂಗಳೂರು ಇದರ ಅಧ್ಯಕ್ಷ ಎ.ವಿ.ತೀರ್ಥರಾಮ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮಂಗಳೂರು ಮೀನುಗಾರಿಕೆ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಕೆ. ಗಣೇಶ್, ಸುಳ್ಯ ತಹಶಿಲ್ದಾರ್ ಮಂಜುನಾಥ್, ಸುಳ್ಯ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಕಿಶೋರಿ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ಮೀನುಗಾರಿಕೆ ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ಡೀನ್ ಡಾ. ಹೆಚ್.ಎನ್. ಆಂಜನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇಲಾಖೆಯ ಅಪರ ನಿರ್ದೇಶಕ ದಿನೇಶ್ ಕುಮಾರ್ ಕಳೆ ಸ್ವಾಗತಿಸಿ ಇಲಾಖೆಯ ಅಪರ ನಿರ್ದೇಶಕ ತಿಪ್ಪೇಸ್ವಾಮಿ ವಂದಿಸಿದರು.
ಇಲಾಖೆ ನಿರ್ದೇಶಕ ರಾಮಾಚಾರ್ಯ ಪುರಾಣಿಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಲತಾಶ್ರೀ ಸುಪ್ರಿತ್ ಕಾರ್ಯಕ್ರಮ ನಿರೂಪಿಸಿದರು. ಕೆ. ಆರ್. ಗೋಪಾಲಕೃಷ್ಣ ಪ್ರಾರ್ಥಿಸಿದರು. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ವಿವಿಧ ಫಲಾನುಭವಿಗಳಿಗೆ ಸಹಾಯಧನ ದಾಖಲೆ, ನಿಗಮದ ಅಧ್ಯಕ್ಷರಿಗೆ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.


ಏನಿದು ಯೋಜನೆ:


ಪೈಲಟ್ ಯೋಜನೆಯ ಹಂತದಲ್ಲಿ ಪ್ರಾಯೋಗಿಕವಾಗಿ, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವೋದ್ಯೋಗ ದ್ಯೇಯದೊಂದಿಗೆ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಉದ್ದೇಶದಿಂದ 300 ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯ ಮೀನು ಶೇಖರಣೆ, ಪ್ರದರ್ಶನ ಮತ್ತು ಶೀತಲೀಕರಣ ಸಾಧನಗಳನ್ನು ಅಳವಡಿಸಲಾಗಿದೆ, ಮತ್ಸ್ಯವಾಹಿನಿಗಳು 599 ಕೆಜಿಯಷ್ಟು ಪೇಲೋಡ್ ಸಾಮಾರ್ಥ್ಯ ಹೊಂದಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆಗೆ 3 ಜನರ ಅಗತ್ಯವಿದೆ. ಈ ವಾಹನ ಶೈತೀಕರಿಸಿದ ವಿಭಾಗಗಳೊಂದಿಗೆ ಅಳವಡಿಸಲ್ಪಟ್ಟಿದೆ. ಈ ವಾಹನ ಬ್ಯಾಟರಿಯೊಂದಿಗೆ ಚಲಿಸುತ್ತಿದ್ದು ಪರಿಸರ ಸ್ನೇಹಿಯಾಗಿದೆ.