ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗಾಗಿ ಶ್ವೇತಪಡೆ:ಡಾ. ದಾಮ್ಲೆಯವರ ಪರಿಕಲ್ಪನೆಗೆ ಪ್ರಶಸ್ತಿ

0

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದು ಕೈ ಖಾಲಿ ಮಾಡಿಕೊಳ್ಳುವ ಜನರ ಸ್ವಭಾವ ಬದಲಾಗಬೇಕು. ಇದಕ್ಕಾಗಿ
ಕಾನೂನು, ಸೂಚನೆ, ದಂಡ, ಫಲಕ ಮುಂತಾದ ಉಪಾಯಗಳು ಫಲಪ್ರದವಾಗುವುದಿಲ್ಲ. ಸ್ವಯಂಸೇವಾ ಸಂಸ್ಥೆಗಳು ಶ್ರಮದಾನ ಮಾಡಿ ತೋರಿಸಿದರೂ ಜನರಿಗೆ ಅರ್ಥವಾಗುವುದಿಲ್ಲ. ಇನ್ನೇನು ಮಾಡಲು ಸಾಧ್ಯ? ಈ ಪ್ರಶ್ನೆಗೆ ಉತ್ತರ ಹುಡುಕುವ ಯತ್ನದಲ್ಲಿ ದಾಮ್ಲೆಯವರಿಗೆ ಮೂಡಿದ ಚಿಂತನೆಯೇ ಶ್ವೇತ ಪಡೆ. ಕಸವನ್ನು ಎಸೆದವರೇ ಕಸವನ್ನು ಹೆಕ್ಕಿ ಕಸದ ತೊಟ್ಟಿಗೆ ಹಾಕುವಂತೆ ಎಳೆಯ ಮಕ್ಕಳಿಂದ ವಿನಂತಿ ಮಾಡಿಸುವುದು. ಸಣ್ಣವರ ವಿನಂತಿಗೆ ದೊಡ್ಡವರು ಬಾಗದಿರುವುದಿಲ್ಲ. ಅಂತಹ ಒಂದು ಪ್ರಯೋಗಕ್ಕೆ ತೊಡಗಲು ಸ್ಥಳೀಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಅವಕಾಶ ಸಿಕ್ಕಿತು.

ಸ್ನೇಹ ಶಾಲೆಯ ಆಸಕ್ತ ವಿದ್ಯಾರ್ಥಿಗಳ ತಂಡ ರಚಿಸಿ ಭಕ್ತಾದಿಗಳು ಎಸೆದ ಕಸವನ್ನೆತ್ತಿ ಡಸ್ಟ್ ಬಿನ್ ಗೆ ಹಾಕಲು ವಿನಯ ಪೂರ್ವಕವಾಗಿ ಅವರಲ್ಲೇ ವಿನಂತಿಸುವ ತರಬೇತಿ ನೀಡಿದರು. ಹಿರಿಯರಲ್ಲಿ ಜಗಳಕ್ಕಿಳಿಯದೆ ಸ್ನೇಹದಿಂದ ಮನವೊಲಿಸುವ ಉಪಾಯಗಳನ್ನು ಹೇಳಿಕೊಟ್ಟರು.

ದೇವಾಲಯದ ಆಡಳಿತ ಮಂಡಳಿಯ ಒಪ್ಪಿಗೆಯೊಂದಿಗೆ ಸ್ನೇಹ ಶಾಲೆಯ ಶ್ವೇತಪಡೆ ಕಾರ್ಯೋನ್ಮುಖವಾಯಿತು. ಜಾತ್ರೆಯಲ್ಲಿ ಒಂದು ಸಣ್ಣ ಸಂಚಲನ ಉಂಟಾಯಿತು. ಎಳೆಯರ ವಿಜ್ಞಾಪನೆಯನ್ನು ಹಿರಿಯರು ಗೌರವಿಸಿದರು. ಹೀಗೆ ಬ್ರಹ್ಮಕಲಶದ ಒಂಭತ್ತು ದಿನಗಳಲ್ಲಿಯೂ ಶ್ವೇತಪಡೆ ಸ್ವಚ್ಛತೆಗಾಗಿ ಶ್ರಮಿಸಿತು. ಇದು ಸಂಜೆಯ ಹೊತ್ತಿನ ಕಾರ್ಯಕ್ರಮವಾದುದರಿಂದ ಮಕ್ಕಳ ನಿತ್ಯದ ಕಲಿಕೆಗೆ ತೊಂದರೆಯಾಗಲಿಲ್ಲ.

ಮುಂದೆ ದಾಮ್ಲೆಯವರು ಈ ಪ್ರಯೋಗವನ್ನು ಆಲೆಟ್ಟಿ ಸದಾಶಿವ ದೇವಸ್ಥಾನದ ಜಾತ್ರೆಯಲ್ಲಿ ಮುಂದುವರಿಸಿದರು. ಅಲ್ಲಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಶ್ವೇತಪಡೆಯನ್ನು ರಚಿಸಲಾಯಿತು. ಅಲ್ಲಿ ಯಶಸ್ವಿಯಾದ ಬಳಿಕ ವಿನೋಬ ನಗರದ ವಿವೇಕಾನಂದ ಶಾಲೆಯಲ್ಲಿ ರಚಿಸಲಾದ ಶ್ವೇತಪಡೆಯು ಅಡ್ಕಾರಿನ ಸುಬ್ರಹ್ಮಣ್ಯೇಶ್ವರ ದೇವಾಲಯದ ಜಾತ್ರೆಯಲ್ಲಿ ಸ್ವಚ್ಛತೆಯನ್ನು ಉಳಿಸಿತು. ಹೀಗೆ ಸ್ಥಳೀಯ ವಿದ್ಯಾರ್ಥಿಗಳನ್ನು ಒಳಗೂಡಿಸಿಕೊಂಡದ್ದು ಸ್ವಚ್ಛತೆಯ ಪ್ರಜ್ಞೆಯನ್ನು ಆಬಾಲವೃದ್ಧರಲ್ಲಿ ಪ್ರಚುರಪಡಿಸಲು ಸಹಾಯವಾಗಿದೆ ಎಂಬುದು ಡಾ. ದಾಮ್ಲೆಯವರ ಅಭಿಪ್ರಾಯ. ಈ ಮೂರೂ ಸಂದರ್ಭಗಳಲ್ಲಿ ಸೇರಿದ್ದ ಭಕ್ತಗಣ ಹಾಗೂ ಶಾಲಾ ವಿದ್ಯಾರ್ಥಿಗಳನ್ನು ಲೆಕ್ಕಹಾಕಿದರೆ ಸುಮಾರು ೧೦,೦೦೦ ಕ್ಕೂ ಹೆಚ್ಚುಮಂದಿಗೆ ತಮ್ಮ ಕೈಯ ಕಸವನ್ನು ಸೂಕ್ತ ಸ್ಥಳದಲ್ಲಿ ಎಸೆಯಬೇಕೆಂಬ ಸಂದೇಶ ಸಿಕ್ಕಿದೆಯೆನ್ನಬಹುದು.

ಇಂತಹ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಮಕ್ಕಳಲ್ಲಿ ವಿಸ್ತರಿಸಿ ಒಂದು ಉಪಯುಕ್ತ ಕಾರ್ಯವನ್ನು ನಡೆಸಲು ಶ್ವೇತಪಡೆಯನ್ನು ರೂಪಿಸಿದ್ದನ್ನು ಭಾರತದ ‘ಗ್ರೀನ್ ಹೀರೋ’ ಪ್ರಸಿದ್ಧಿಯ ಡಾ. ಆರ್. ಕೆ. ನಾಯರ್ ರವರು ಮೆಚ್ಚಿಕೊಂಡಿದ್ದಾರೆ. ಅವರು ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಜೂನ್ ೫ ರಂದು ಗುಜರಾತ್ ನ ಭುಜ್ ಎಂಬಲ್ಲಿ ಜರಗುವ ಸರಕಾರಿ ಸಮಾರಂಭದಲ್ಲಿ ಡಾ. ದಾಮ್ಲೆಯವರ ಶ್ವೇತಪಡೆಯನ್ನು ಪ್ರಶಸ್ತಿ ನೀಡಿ ಗೌರವಿಸಲು ನಾಮನಿರ್ದೇಶನ ಮಾಡಿದ್ದಾರೆ. ದಾಮ್ಲೆಯವರೊಂದಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಹಾಗೂ ಸ್ನೇಹ ಶಾಲೆಯ ಶ್ವೇತಪಡೆಯ ಪ್ರತಿನಿಧಿಗಳಾಗಿ ಹತ್ತನೆಯ ಕು. ಜ್ಞಾನವಿ ಮತ್ತು ಒಂಭತ್ತನೆಯ ಅರುಣ್ ಪ್ರಭು ಭಾಗವಹಿಸುತ್ತಾರೆ.