ಗುತ್ತಿಗಾರು: ಪಾದಾಚಾರಿಗೆ ಬೈಕ್ ಡಿಕ್ಕಿ, ಕೇಸು ದಾಖಲು

0

ಗುತ್ತಿಗಾರಿನಲ್ಲಿ ಪಾದಾಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಪಾದಾಚಾರಿ ಹಾಗೂ ಬೈಕ್ ಸವಾರ ಗಾಯಗೊಂಡಿರುವ ಘಟನೆ ಜೂ.೮ ರಂದು ಸಂಜೆ ನಡೆದಿದೆ.

ನಿನ್ನೆ ಸಂಜೆ ಚಿನ್ನಪ್ಪ ಗೌಡ ಎಂಬವರು ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಮೆಡಿಕಲ್ ಅಂಗಡಿಗೆ ಹೋಗಿ ವಾಪಸ್ಸಾಗುತಿದ್ದ ವೇಳೆ ರಸ್ತೆ ದಾಟಲು ಮುಂದಾದಾಗ ಸುಬ್ರಹ್ಮಣ ಕಡೆಯಿಂದ ಸುಳ್ಯ ಕಡೆಗೆ ಬರುತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಚಿನ್ನಪ್ಪ ಗೌಡರು ರಸ್ತೆಗೆ ಎಸೆಯಲ್ಪಟ್ಟರು. ಅವರ ಎಡ ಬದಿ ಹಣೆಗೆ, ಮುಖಕ್ಕೆ, ಕತ್ತಿನ ಹಿಂಭಾಗಕ್ಕೆ, ಸೊಂಟದ ಹಿಂಬದಿಗೆ ಹಾಗೂ ಬಲಗಾಲಿನ ಮೊಣಗಂಟಿಗೆ ರಕ್ತ ಗಾಯಗಳಾಗಿವೆ.

ಬೈಕ್ ಸವಾರನಿಗೂ ಸಹ ತಲೆಗೆ, ಎಡ ಭುಜಕ್ಕೆ ಸೊಂಟ ಹಾಗೂ ಕಾಲುಗಳಿಗೆ ಗಾಯವಾಗಿದ್ದು, ಸ್ಥಳೀಯರು ಇರ್ವರನ್ನೂ ಆoಬುಲೆನ್ಸ್ ನಲ್ಲಿ ಸುಳ್ಳಕ್ಕೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದ್ದು, ಬೈಕ್ ಚಾಲಕರಾದ ರಂಜನ್ ಎಂಬವರ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾಗಿರುವುದಾಗಿ ವರದಿಯಾಗಿದೆ.