ಅಕ್ಕಿ ನೀಡದೆ ಬಡವರ ಹೊಟ್ಟೆಗೆ ಹೊಡೆಯುವ ಬಿಜೆಪಿಯ ಎಡಬಿಡಂಗಿತನ ಸರಿಯಲ್ಲ

0

ಜುಲೈಯಿಂದ 10 ಕೆ.ಜಿ. ಅಕ್ಕಿ ಕೊಡುವುದು ಶತ ಸಿದ್ಧ : ವೆಂಕಪ್ಪ ಗೌಡ

ಕಾಂಗ್ರೆಸ್ ನಿಂದ ಯಾರೂ ಹೊರಗೆ ಹೋಗುವುದಿಲ್ಲ – ನಾವೆಲ್ಲ ಕಾಂಗ್ರೆಸ್ಸಿಗರು

ನಮಗೆ ಪುಕ್ಸಟೆ ಅಕ್ಕಿ ಬೇಡ. ದುಡ್ಡು ಕೊಡುತ್ತೇವೆ ಎಂದರೂ ಕೇಂದ್ರ ಸರಕಾರ ರಾಜಕೀಯ ಕಾರಣಕ್ಕಾಗಿ ಅಕ್ಕಿ ಕೊಡದೇ ಬಡವರ ಹೊಟ್ಟೆಗೆ ಹೊಡೆಯುತ್ತಿದೆ. ಸರಕಾರದ ಈ ಕ್ರಮ ಸರಿಯಲ್ಲ. ಬಿಜೆಪಿಯವರು ಏನೇ ಕುತಂತ್ರ ಮಾಡಿದರೂ ಜುಲೈ 1 ರಿಂದ 10 ಕೆ.ಜಿ. ಅಕ್ಕಿ ಕೊಡುವುದಂತೂ‌ ಗ್ಯಾರಂಟಿ ಎಂದು‌ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಜೂ.20 ರಂದು‌ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ‌ನಡೆಸಿದ ಅವರು, ಕೇಂದ್ರದಲ್ಲಿ ಹೆಚ್ಚುವರಿ ಅಕ್ಕಿ ಇದೆ. ಕಾಂಗ್ರೆಸ್ ಸರಕಾರದ ಕೇಳಿಕೆಯಂತೆ ಭಾರತೀಯ ಆಹಾರ ನಿಗಮ ಜೂ.12 ರಂದು ಅಕ್ಕಿ ನೀಡಲು ಒಪ್ಪಿಗೆ ನೀಡಿತ್ತು. ಅದಕ್ಕೆ ಹಣವನ್ನೂ ನಾವು ಪಾವತಿಸಬೇಕಿತ್ತು. ಹೀಗಿರುವಾಗ ಮರುದಿನ ರಾಜ್ಯದ ಬಿಜೆಪಿ ನಾಯಕರ ಕುತಂತ್ರದಿಂದಾಗಿ ಅಕ್ಕಿ ನೀಡಲು ಸಾಧ್ಯ ಇಲ್ಲ ಎಂದು ಕೇಂದ್ರ ಹೇಳಿದೆ. ಬಡವರಿಗೆ ಸಿಗುವ ಅಕ್ಕಿಯನ್ನು ಸಿಗದಂತೆ‌ ಬಿಜೆಪಿ ತಡೆದು ಎಡಬಿಡಂಗಿತನ ಪ್ರದರ್ಶಿಸಿದೆ. ಬಿಜೆಪಿಗರು ಬಡವರ ಪರ ನಿಲ್ಲಬೇಕಿತ್ತು. ಆದರೆ ಅವರು ರಾಜಕೀಯ ಮಾಡಿದರು. ಆದರೂ ಕಾಂಗ್ರೆಸ್ ನುಡಿದಂತೆ ನಡೆಯುತ್ತದೆ. ನಮಗೆ ಪಂಜಾಬ್ ಸರಕಾರ ಅಕ್ಕಿ ನೀಡಲು ಒಪ್ಪಿದ್ದು ಜುಲೈ 1 ರಿಂದ 10 ಕೆಜಿ‌ ಅಕ್ಕಿ ಘೋಷಣೆ ಯಂತೆ‌ ಸಿಗಲಿದೆ ಎಂದ ಅವರು ಕೇಂದ್ರ ಅಕ್ಕಿ ನೀಡುತ್ತಿದ್ದರೆ ಸ್ವಲ್ಪ ಕಡಿಮೆ ದರ ಕೊಡಬೇಕಿತ್ತು. ಆದರೆ ಈಗ ಸ್ವಲ್ಪ‌ಹೆಚ್ಚು ಖರ್ಚಾಗಲಿದ್ದು ಅದರ ಹೊರೆ ಜನರಿಗೆ ಬೀಳಲಿದೆ. ಇದಕ್ಕೆ ಕಾರಣ ಬಿಜೆಪಿ ಎಂದು ವೆಂಕಪ್ಪ ಗೌಡರು ಹೇಳಿದರು.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮೆಸ್ಕಾಂಗೆ ಹೋಗಬೇಕಿಲ್ಲ.‌ಅವರವರ ಮೊಬೈಲ್ ನಲ್ಲಿ ಸೇವಾ ಸಿಂಧು ಆಪ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು.

ಪಕ್ಷದಿಂದ ಯಾರೂ ಹೊರಗೆ ಹೋಗಬಾರದು. ಎಲ್ಲರೂ ಒಟ್ಟಿಗೆ ಇದ್ದು ಸಂಘಟನೆ ಮಾಡಬೇಕು ಎಂದು ಕೆಪಿಸಿಸಿ‌ ಅಧ್ಯಕ್ಷರೇ ಹೇಳಿದ್ದಾರೆಂಬ ಮಾಹಿತಿ ನಮಗಿದೆ. ಆದ್ದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಪಕ್ಷಕ್ಕಾಗಿ ದುಡಿದವರು ಎಲ್ಲರೂ ಪಕ್ಷದಲ್ಲೇ ಇರುತ್ತಾರೆ ಎಂದು ವೆಂಕಪ್ಪ ಗೌಡರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರಲ್ಲದೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಮಿತಿಯನ್ನು‌ ವಿಸರ್ಜಿಸಿರುವುದು ಅವರ ಅಧಿಕಾರ. ಮತ್ತೆ ಸಮಿತಿ ಮಾಡುತ್ತಾರೆ. ಎಲ್ಲರಿಗೂ ಅಲ್ಲಿ ಅವಕಾಶ ಸಿಗಬಹುದೆಂಬ ವಿಶ್ವಾಸ ನಮಗಿದೆ ಎಂದು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ನ.ಪಂ. ಸದಸ್ಯ ರುಗಳಾದ ಡೇವಿಡ್ ಧೀರಾ ಕ್ರಾಸ್ತ, ಶರೀಫ್ ಕಂಠಿ, ಕೆ.ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಇದ್ದರು.