ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಪುರುಷರಾಯ ಬೆಟ್ಟದಲ್ಲಿ ನೂತನವಾಗಿ ನಿರ್ಮಿತವಾದ ಹೊಸಳಿಗಮ್ಮ, ಪುರುಷರಾಯ ಮತ್ತು ಇತರ ದೈವಗಳ ಗುಡಿಗಳಲ್ಲಿ ದೈವಗಳ ಪ್ರತಿಷ್ಠಾ ಕಾರ್ಯದ ನಿಮಿತ್ತ ಬೆಟ್ಟದಲ್ಲಿ ಮೇ.11ರಂದು ವಿವಿಧ ವೈಧಿಕ ವಿದಿವಿಧಾನಗಳು ನೆರವೇರಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ನೇತೃತ್ವದಲ್ಲಿ ಋತ್ವಿಜರು ವಿವಿಧ ಧಾರ್ಮಿಕ ಕಾರ್ಯಗಳನ್ನು ಮಾಡಿದರು.
ಬೆಳಗ್ಗೆ ಪುರುಷರಾಯ ಬೆಟ್ಟದಲ್ಲಿ 12 ತೆಂಗಿನಕಾಯಿ ಗಣಪತಿ ಹೋಮ ನಡೆಯಿತು. ನಂತರ ಹೋಮ ಸಹಿತವಾಗಿ ಆಶ್ಲೇಷ ಬಲಿ ಸೇವೆ ನೆರವೇರಿತು. ಆಶ್ಲೇಷ ಬಲಿ ಸಂಪನ್ನವಾಯಿತು. ನಂತರ ಸರ್ವರಿಗೂ ಪ್ರಸಾದ ವಿತರಣೆ ನಡೆಯಿತು. ಸಂಜೆ ಕುಕ್ಕೆ ದೇವಳದಿಂದ ದೈವಗಳ ಭಂಡಾರ ಪುರುಷರಾಯ ಬೆಟ್ಟಕ್ಕೆ ಆಗಮಿಸಿತು. ಬಳಿಕ ಬೆಟ್ಟದಲ್ಲಿ ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜಾ ಬಿಂಬ, ಶಯ್ಯಾಧಿವಾಸ ನೆರವೇರಿತು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾದ ಪಿ.ಜಿ ಎಸ್ ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ, ಲೊಕೇಶ್, ಮನೋಹರ ರೈ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಅರ್ಚಕ ನಾರಾಯಣ ಭಟ್, ಶ್ರೀ ದೇವಳದ ಷಣ್ಮುಖ ಉಪರ್ಣ ಮತ್ತಿತರರು ಉಪಸ್ಥಿತರಿದ್ದರು.