ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರಿಂದ ಮಾತಿನ ಚಕಮಕಿ ಪೊಲೀಸ್ ಮಧ್ಯಸ್ಥಿಕೆ
ಅಪರಾಹ್ನ 3 ಗಂಟೆ ವೇಳೆಗೆ ಶೇ.75 ಮತದಾನ
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಇಂದು ನಡೆದಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಪೊಲೀಸ್ ಮಧ್ಯಸ್ಥಿಕೆಯಲ್ಲಿ ಶಮನವಾಗಿದೆ. ಪೆರಾಜೆ ಸಹಕಾರಿ ಸಂಘದ ಮತದಾನ ಕೇಂದ್ರಕ್ಕೆ ಬಿಜೆಪಿ ಕಾರ್ಯಕರ್ತರು ವೃದ್ಧೆ ಮತದಾರರೋರ್ವರನ್ನು ಕರೆತರುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮನು ಪೆರುಮುಂಡ ಅವರು ಇದನ್ನು ಪ್ರಶ್ನಿಸಿ, ಅವರನ್ನು ಕರೆತರಲು ಅವರ ಮನೆಯವರಿಲ್ಲವೇ, ನೀವ್ಯಾಕೆ ಕರೆತರುತ್ತೀರಿ ಎಂದು ಪ್ರಶ್ನಿಸಿದರೆನ್ನಲಾಗಿದೆ. ಈ ವೇಳೆ ಬಿಜೆಪಿ ಅಭ್ಯರ್ಥಿ ನಾಗೇಶ್ ಕುಂದಲ್ಪಾಡಿ ಹಾಗೂ ಮನು ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ. ಈ ವೇಳೆ ಅಲ್ಲಿ ಸೇರಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆಯಿತೆನ್ನಲಾಗಿದೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ, ಪರಿಸ್ಥಿತಿ ಶಮನಗೊಳಿಸಿದರು.
ಅಪರಾಹ್ನ ಮೂರು ಘಂಟೆಯ ವೇಳೆಗೆ ಶೇ.75ರಷ್ಟು ಮತದಾನವಾಗಿದ್ದು, ರಾತ್ರಿ 7 ಗಂಟೆಯ ವೇಳೆಗೆ ಮತದಾನದ ಪೂರ್ಣ ಫಲಿತಾಂಶ ಘೋಷಣೆಯಾಗಲಿದೆ.
ಹದಿಮೂರು ಸ್ಥಾನಗಳೂ ನಮಗೆ ನಾಗೇಶ್ ಕುಂದಲ್ಪಾಡಿ
ಬಿಜೆಪಿ ಮುಖಂಡ ನಾಗೇಶ್ ಕುಂದಲ್ಪಾಡಿ ಅವರು ‘ಸುದ್ದಿ’ಯೊಂದಿಗೆ ಮಾತನಾಡಿ ಈ ಬಾರಿಯ ಪೆರಾಜೆ ಸಹಕಾರಿ ಸಂಘದ ಚುನಾವಣೆಯಲ್ಲಿ ಎಲ್ಲಾ ಹದಿಮೂರು ಸ್ಥಾನಗಳನ್ನೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ: ಸುರೇಶ್ ಪೆರುಮುಂಡ
ಕಾಂಗ್ರೆಸ್ ಮುಖಂಡ ಸುರೇಶ್ ಪೆರುಮುಂಡ ಅವರು ‘ಸುದ್ದಿ’ಯೊಂದಿಗೆ ಮಾತನಾಡಿ ಈ ಬಾರಿಯ ಸಹಕಾರಿ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಮೇಲುಗೈ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.