ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯಸ್ಮರಣೆ ಕಾರ್ಯಕ್ರಮ

ಉತ್ತಮ ಕೆಲಸಗಾರರನ್ನು ಈ ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ- ಕೇರಳ ಸಚಿವ ಜ|ಅಹಮ್ಮದ್ ದೇವರಕೊವಿಲ್

0

ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವೀಜೆತ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ ಸಮಾಜ ಸುಧಾರಕ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯಸ್ಮರಣೆ ಕಾರ್ಯಕ್ರಮ, ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಧಾನ ಸಮಾರಂಭ, ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ.23ರಂದು ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್ ವಹಿಸಿದ್ದರು.

ಕೇರಳ ಸರ್ಕಾರದ ಮಾನ್ಯ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವರಾದ ಜ|ಅಹಮ್ಮದ್ ದೇವರಕೊವಿಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ “ಉತ್ತಮ ಕೆಲಸ ಮಾಡುವವರನ್ನು ಈ ಸಮಾಜ ಎಂದಿಗೂ ಮರೆಯುವುದಿಲ್ಲ, ಇದಕ್ಕೆ ಪ್ರಮುಖ ಉದಾಹರಣೆ ತೆಕ್ಕಿಲ್ ಮಹಮ್ಮದ್ ಹಾಜಿಯವರು. ಇವರ ಸರಳ ಜೀವನ ಎಲ್ಲರಿಗೂ ಮಾದರಿಯಾಗಿದೆ. ಉತ್ತಮ ಕೆಲಸಗಾರನಾಗಿದ್ದ ಇವರು ಜಾತಿ, ಧರ್ಮ ಯಾವುದು ಇಲ್ಲದೆ ಮಾನವ ಧರ್ಮದಿಂದ ಬದುಕಿದ್ದರು ಎಂದರು.

ಮಹಮ್ಮದ್ ಹಾಜಿಯವರ ಪರಂಪರೆಯನ್ನು ಮುಂದುವರಿಸಿ ಟಿ.ಎಂ.ಶಹೀದ್ ನೇತೃತ್ವದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಜಾತಿ, ಧರ್ಮ, ಬೇದ ಇಲ್ಲದೆ ಎಲ್ಲರಿಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ ನೀಡುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಇನ್ನಷ್ಟು ಸೇವಾ ಕಾರ್ಯ ನಡೆಯಲಿ ಎಂದು ಶುಭಹಾರೈಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷರಾದ ಕೆ.ಆರ್.ಗಂಗಾಧರ್ ಕುರುಂಜಿ ಮಾತನಾಡಿ ತೆಕ್ಕಿಲ್ ಮಹಮ್ಮದ್ ಹಾಜಿಯವರು ಒಳ್ಳೆಯ ಕೆಲಸಗಾರ, ಭತ್ತದ ಕೃಷಿ ಮಾಡುತ್ತಿದ್ದರು. ಪೇರಡ್ಕ ಮಸೀದಿಗಾಗಿ ತುಂಬಾ ದುಡಿದಿದ್ದು, ಮಸೀದಿಯ ಜನಕ ಎಂದು ಹೇಳಬಹುದು.
ಆಗಿನ ದಿನಗಳಗಳಲ್ಲಿ ಜಾತಿ, ಧರ್ಮ ನೋಡದೆ ಜನರಿಗೆ ಸಹಾಯ ಮಾಡುತ್ತಿದ್ದರು, ಈಗ ಇದೇ ಹಾದಿಯಲ್ಲಿ ಅವರ ಮೊಮ್ಮಗ ಟಿ.ಯಂ.ಶಹೀದ್ ನಡೆಯುತ್ತಿದ್ದಾರೆ. ಈ ನಡೆ ಸ್ವಾಗತಾರ್ಹ ಎಂದರು.

ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿಗೆ ಅಯ್ಕೆಯಾದ ಸ್ಪೀಕರ್ ಯು.ಟಿ. ಖಾದರ್ ಅವರ ಅಭಿನಂದನಾ ಭಾಷಣ ಮಾಡಿದ ಎಂ.ಬಿ. ಫೌಂಡೇಷನ್ ಅಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿ ಯು.ಟಿ.ಖಾದರ್ ಉತ್ತಮ ರಾಜಕಾರಣಿ, ಅದಕ್ಕಿಂದ ಮುಖ್ಯವಾಗಿ ಅವರು ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣವಿದೆ. ಹಾಗಾಗಿ ಅವರು ಸ್ಪೀಕರ್ ಹುದ್ದೆಗೆ ಸರಿ ಹೊಂದುತ್ತಾರೆ. ಜೊತೆಗೆ ಸದನಕ್ಕೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದರು.

ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಅತ್ಯಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಕರ್ನಾಟಕ ಲೋಕಸಭಾ ಅಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಗೌರವಿಸಿದರು.

ತೆಕ್ಕಿಲ್ ಪ್ರತಿಷ್ಠಾನದ ನವೀಕರಣಗೊಂಡ ಕಚೇರಿಯನ್ನು ಸಚಿವ ಅಹಮ್ಮದ್ ದೇವಕೋವಿಲ್ ಉದ್ಘಾಟಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸಂಪಾಜೆಯ ಸಂತ ಪ್ರಾನ್ಸಿಸ್ ಚರ್ಚ್ನ ಧರ್ಮಗುರುಗಳಾದ ಫಾ.ಫೌಲ್ ಕ್ರಾಸ್ತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಇಸಾಕ್ ಸಾಹೇಬ್ ಪಾಜಪಳ್ಳ, ಕೆ.ಎಂ.ಮುಸ್ತಫ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ತರ್,

ಉದ್ಯಮಿ ಮೊಯಿದೀನ್, ಪ್ರಮುಖರಾದ ಸಮದ್ ನರಿಪಟ್ಟ, ಸದಾನಂದ ಮಾವಜಿ, ಕೆ.ಟಿ.ವಿಶ್ವನಾಥ, ಕೆ.ಆರ್.ಜಗದೀಶ್ ರೈ, ಶರೀಫ್ ಕಂಠಿ, ಮೂಸಾ ಕುಂಞÂ ಪೈಂಬೆಚ್ಚಾಲ್, ಸಿದ್ದಿಕ್ ಕೊಕ್ಕೊ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಇಬ್ರಾಹಿಂ ಚೊಕ್ಕಾಡಿ, ನಿವೃತ್ತ ಪ್ರಾಂಶುಪಾಲ ಉಮ್ಮರ್, ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಸಮಿತಿ ಅಧ್ಯಕ್ಷ ಉನೈಸ್ ಪೆರಾಜೆ, ಮುಖ್ಯೋಪಾಧ್ಯಾಯ ಸಂಪತ್, ತೆಕ್ಕಿಲ್ ಕುಟುಂಬಸ್ಥರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಚೊಕ್ಕಾಡಿ. ಟಿ.ಎಂ.ಖಾಲಿದ್, ಟಿ.ಎಂ.ಜಾವೇದ್ ತೆಕ್ಕಿಲ್, ಟಿ.ಎಂ.ಶಮೀರ್ ತೆಕ್ಕಿಲ್, ಟಿ.ಎಂ.ಶಾಝ್ ತೆಕ್ಕಿಲ್, ಸಾದಿಕ್ ಮಾಸ್ತರ್, ತಾಜ್ ಮಹಮ್ಮದ್ ಸಂಪಾಜೆ ಮತ್ತಿತರರು ಉಪಸ್ಥಿತರಿದ್ದರು. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭಕ್ಕೆ ಮುನ್ನ ಪೇರಡ್ಕ ಮಸೀದಿ ವಠಾರದಲ್ಲಿ ತೆಕ್ಕಿಲ್ ಮೊಹಮ್ಮದ್ ಹಾಜಿ ಮತ್ತು ಕುಟುಂಬಸ್ಥರ ಖಬರ್ ಝಿಯಾರತ್ ಮತ್ತು ಮೌಲೂತ್ ಪಾರಾಯಣ ನಡೆಯಿತು. ಸಚಿವ ಅಹಮ್ಮದ್ ದೇವರಕೋವಿಲ್ ಪೇರಡ್ಕಕ್ಕೆ ಭೇಟಿ ನೀಡಿದರು.

ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಗೆ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಬೆಳಿಗ್ಗೆ ತೆಕ್ಕಿಲ್ ನಿವಾಸಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ತುರ್ತು ಕಾರ್ಯಕ್ರಮದ ನಿಮಿತ್ತ ತೆರಳಿದರು.