ಪ್ರತಿ ದೇಶವೂ ತಮ್ಮದೇ ಆದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನ ಹೊಂದಿದೆ. ನಮ್ಮ ಭಾರತ ದೇಶವೂ ಅದಕ್ಕೆ ಹೊರತಲ್ಲ. ನಮ್ಮ ರಾಷ್ಟ್ರಗೀತೆ ಜನಗಣಮನ, ರಾಷ್ಟ್ರ ಲಾಂಛನ ಅಶೋಕಚಕ್ರ ಮತ್ತು ರಾಷ್ಟ್ರಧ್ವಜ ಕೇಸರಿ, ಬಿಳಿ, ಹಸಿರು ಬಣ್ಣದಿಂದ ಕೂಡಿದ ತ್ರಿವರ್ಣ ಪತಾಕೆ ಆಗಿರುತ್ತದೆ.
ರಾಷ್ಟ್ರಧ್ವಜ ಎನ್ನುವುದು ಸಾರ್ವಭೌಮತ್ವದ ಸಂಕೇತವಾಗಿದ್ದು, ಎಲ್ಲರೂ ಅದನ್ನು ಗೌರವಿಸಲೇಬೇಕು. ರಾಷ್ಟ್ರಧ್ವಜಕ್ಕೆ ಅಪಮಾನವಾದರೆ ದೇಶಕ್ಕೆ ಅಪಮಾನವಾದಂತೆ. ಅವಮಾನ ಮಾಡಿದವರು ದೇಶದ್ರೋಹಿ ಯಾಗುತ್ತಾನೆ.ನಮ್ಮ ಭಾರತದ ರಾಷ್ಟ್ರಧ್ವಜವನ್ನು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದ ಸಮಿತಿ ವಿನ್ಯಾಸಗೊಳಿಸಿತ್ತು. 1947ನೇ ಜುಲೈ 22 ರಂದು ರಾಷ್ಟ್ರಧ್ವಜ ಅಂಗೀಕರಿಸಲ್ಪಟ್ಟಿತ್ತು.
(1) ನಮ್ಮ ರಾಷ್ಟ್ರಧ್ವಜದಲ್ಲಿರುವ ಬಣ್ಣಗಳು, ಕೇಸರಿ, ಬಿಳಿ ಮತ್ತು ಹಸಿರು ಇವುಗಳು ಸಮಾನ ಪ್ರಮಾಣದಲ್ಲಿ ಇದ್ದು, ಅಡ್ಡದಾಗಿ ರಚಿಸಲ್ಪಟ್ಟ ತ್ರಿವರ್ಣ ಪತಾಕೆಯಾಗಿರುತ್ತದೆ. ಮೇಲ್ಬಾಗದ ಕೇಸರಿ ಬಣ್ಣ ಶೌರ್ಯ ಮತ್ತು ತ್ಯಾಗವನ್ನು, ಶ್ವೇತ ಬಣ್ಣ ಸತ್ಯ ಮತ್ತು ಶಾಂತಿಯನ್ನು ಬಿಂಬಿಸುತ್ತದೆ ಮತ್ತು ಕೆಳಗಿನ ಹಸಿರು ಬಣ್ಣ ಸಮೃದ್ಧಿಯ ಸಂಕೇತವಾಗಿದೆ.
(2) ರಾಷ್ಟ್ರಧ್ವಜವನ್ನು ಅರಳಿಸುವಾಗ ಮೇಲೆ ಕೇಸರಿ, ಮಧ್ಯದ್ದು ಬಿಳಿ ಮತ್ತು ಕೆಳಗಡೆ ಹಸಿರು ಬಣ್ಣವಿರಬೇಕು. ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಬಾರದು.
(3) ರಾಷ್ಟ್ರಧ್ವಜದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದ್ದು, ಅದರಲ್ಲ್ಲಿ 24 ಅರಗಳುಳ್ಳ ಚಕ್ರವಿದೆ. ಇದು ಪ್ರಗತಿಯನ್ನು ಸೂಚಿಸುತ್ತದೆ. ಚಕ್ರದ ವ್ಯಾಸವು ಬಿಳಿ ಬಣ್ಣದ ಪಟ್ಟಿಯ ಅಗಲದಷ್ಟೇ ಇರುತ್ತದೆ.
(4) ರಾಷ್ಟ್ರಧ್ವಜದ ಉದ್ದವು, ಅದರ ಅಗಲದ ಮೂರನೇ ಎರಡು ಭಾಗದಷ್ಟು ಇರಬೇಕು, ಧ್ವಜ ಪತಾಕೆ ಆಯತಾಕಾರದಲ್ಲಿದ್ದು, ಉದ್ದ ಅಗಲದ ಪ್ರಮಾಣ 3:2 ಹಾಗೂ 9:6 ರ ಅನುಪಾತ ಕ್ರಮದಲ್ಲಿ ಇರುತ್ತದೆ.
(5) ರಾಷ್ಟ್ರಧ್ವಜವನ್ನು ಹತ್ತಿ ಬಟ್ಟೆ ಅಥಾ ರೇಷ್ಮೆ ಬಟ್ಟೆಯಲ್ಲಿ ಮಾತ್ರ ಮಾಡಲಾಗುತ್ತದೆ. ಅದರ ದಾರ ಕೈಯಿಂದಲೇ ಮಾಡಿದ್ದಾಗಿರುತ್ತದೆ.
(6) ರಾಷ್ಟ್ರಧ್ವಜವನ್ನು ಯಾರು ಹೇಗೆ ಬೇಕಾದ ಹಾಗೆ ತಯಾರಿಸುವಂತಿಲ್ಲ. ಅದಕ್ಕೆ ನಿರ್ದಿಷ್ಟ ನೀತಿ ನಿಯಮಗಳಿದೆ. ನೀತಿ ಸಂಹಿತೆಗಳಿದೆ. ಮಹಾರಾಷ್ಟ್ರದ ಉದಯಗಿರಿ, ತಮಿಳುನಾಡಿನ ತಿರುಪೇರಿ, ಕರ್ನಾಟಕದ ಗದಗದಲ್ಲಿ ಗ್ರಾಮೋದ್ಯೋಗ ಸಂಘದವರು ತಾವು ಸಿದ್ದಪಡಿಸಿದ ಖಾದಿ ಬಟ್ಟೆಯಿಂದ ಧ್ವಜಗಳನ್ನು ತಯಾರಿಸುತ್ತಾರೆ.
(7) ರಾಷ್ಟ್ರಧ್ವಜ ಹರಿದುಹೋದರೆ ಅಥವಾ ಉಪಯೋಗಕ್ಕೆ ಬಾರದಂತಾದರೆ ಅದನ್ನು ಬೇರೆ ರೀತಿಯಲ್ಲಿ ಬಳಸುಂತಿಲ್ಲ.
(8) ರಾಷ್ಟ್ರಧ್ವಜವನ್ನು ಸ್ಥಂಭದ ಮಧ್ಯದಲ್ಲಿರುವಂತೆ ಹಾರಿಸಬಾರದು ಕಂಬದ ತುತ್ತ ತುದಿಯಲ್ಲಿಯೇ ಹಾರಿಸಬೇಕು.
(9) ಶೋಕಸೂಚಕ ದಿನಗಳಲ್ಲಿ ರಾಷ್ಟ್ರಧ್ವಜವನ್ನು ತುತ್ತ ತುದಿಯಲ್ಲಿ ಹಾರಿಸಿದ ಬಳಿಕ ಕೆಳಗಿಳಿಸಿ ಅದನ್ನು ಅರ್ಧ ಮಟ್ಟದಲ್ಲಿ ಹಾರಲು ಬಿಡಬೇಕು.
(10) ಇತರ ಧ್ವಜಗಳನ್ನು ರಾಷ್ಟ್ರಧ್ವಜಕ್ಕೆ ಎಡಭಾಗದಲ್ಲಿಯೇ ಹಾರಿಸಬೇಕು. ಇತರ ಧ್ವಜಗಳಿಗಿಂತ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಬೇಕು.
(11) ರಾಷ್ಟ್ರ ಧ್ವಜವನ್ನು ಮೇಲೇರಿಸುವಾಗ ತ್ವರಿತವಾಗಿ, ಕೆಳಗಿಳಿಸುವಾಗ ನಿಧಾನವಾಗಿಯೂ ಇಳಿಸಬೇಕು.
(12) ರಾಷ್ಟ್ರ ಧ್ವಜವನ್ನು ಪವಿತ್ರವೆಂದು ಭಾವಿಸಬೇಕು. ಗೌರವಿಸಬೇಕು ಮತ್ತು ಜೋಪಾನ ಮಾಡಬೇಕು. ರಾಷ್ಟ್ರಧ್ವಜವನ್ನು ಇತರ ಬಟ್ಟೆಗಳಂತೆ ಆಲಂಕಾರಿಕ ಬಟ್ಟೆಯಾಗಿ ಅಥವಾ ಅದನ್ನು ಹೊದಿಕೆಯಾಗಿ ಬಳಸುವಂತಿಲ್ಲ.
(13) ರಾಷ್ಟ್ರಧ್ವಜದಲ್ಲಿ ಬೇರೆ ಗುರುತುಗಳನ್ನು ಅಥವಾ ಅಕ್ಷರಗಳನ್ನು ಬರೆಯಬಾರದು.
(14) ರಾಷ್ಟ್ರಧ್ವಜವನ್ನು ಸೂರ್ಯೋದಯದ ನಂತರ ಹಾಗೂ ಸೂರ್ಯಾಸ್ತಮಾನದ ಒಳಗೆ ಹಾರಿಸಬೇಕು.
(15) ಧ್ವಜವನ್ನು ಬಿಡಿಸಿರುವಂತೆಯೇ ಕಟ್ಟಿ ಸ್ಥಂಭದ ಬುಡದಿಂದ ಮೇಲಕ್ಕೆ ತೀವ್ರವಾಗಿ ಕೊಂಡು ಹೋಗಿ ಹಾರಿಸುವುದಕ್ಕೆ ‘ಧ್ವಜ ಏರಿಸುವುದು’ ಎನ್ನುತ್ತಾರೆ. ಕಂಬದ ತುದಿಯಲ್ಲಿ ಮೊದಲೇ ಕ್ರಮಬದ್ದವಾದ ರೀತಿಯಲ್ಲಿ ಕಟ್ಟಿ ಇಟ್ಟು ವಿಧಿಪೂರ್ವಕವಾಗಿ ಬಿಡಿಸುವುದನ್ನು “ಧ್ವಜ ಅರಳಿಸುವುದು” ಎಂದು ಕರೆಯುತ್ತಾರೆ. ಧ್ವಜ ಏರಿಸುವಾಗ ಮತ್ತು ಅರಳಿಸುವಾಗ ನಾವು ನೆಟ್ಟಗೆ ನಿಂತುಕೊಂಡು, ಪತಾಕೆ ಏರಿಸಿದ ಅಥವಾ ಅರಳಿಸಿದ ಬಳಿಕ ಬಲಗೈಯಿಂದ ಸೆಲ್ಯೂಟ್ ನೀಡಬೇಕು.
ಏನಿದು ಅಮೆಂಡ್‍ಮೆಂಟ್? (ತಿದ್ದುಪಡಿ)
ಈ ಮೇಲೆ ತಿಳಿಸಿದ ಎಲ್ಲಾ ವಿಚಾರಗಳನ್ನು ಸಂವಿಧಾನದ ಧ್ವಜ ಸಂಹಿತೆ 2002ರಲ್ಲಿ ರಾಷ್ಟ್ರಧ್ವಜ ಬಳಕೆ, ಪ್ರದರ್ಶನ, ಏರಿಸುವುದು ಅರಳಿಸುವುದು ಮುಂತಾದವುಗಳ ಬಗ್ಗೆ ಸವಿವರವಾಗಿ ತಿಳಿಸಲಾಗಿದೆ.ಇದರಲ್ಲಿ ಈಗ ಎರಡು ಅಮೆಂಡ್‍ಮೆಂಟ್ (ತಿದ್ದುಪಡಿ) ಮಾಡಲಾಗಿದ್ದು ಅದು ಈ ಕೆಳಗಿನಂತಿದೆ.
1) ಈ ಹಿಂದೆ ರಾಷ್ಟ್ರಧ್ವಜವನ್ನು ಖಾದಿ ಅಥವಾ ಹತ್ತಿ ಬಟ್ಟೆ ಮತ್ತು ರೇಷ್ಮೆ ಬಟ್ಟೆಯಲ್ಲಿಯೇ ಮಾಡಲಾಗುತ್ತಿತ್ತು ಮತ್ತು ಕೈಯಿಂದಲೇ ಹೆಣೆದ ಅಥವಾ ನೇಯ್ದು ರಾಷ್ಟ್ರಧ್ವಜ ಮಾಡುತ್ತಿದ್ದರು. 2021, ಡಿಸೆಂಬರ್ 30ರ ಅಮೆಂಡ್‍ಮೆಂಟ್ ಅಥವಾ ಅಧಿಸೂಚಿಯಂತೆ ರಾಷ್ಟ್ರಧ್ವಜವನ್ನು ಕೈಯಿಂದ ಹಣೆದ/ನೇಯ್ದ ಅಥವಾ ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಮೆಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಟ್ಟೆಯಿಂದ ಮಾಡಬಹುದು ಎಂದು ಸೂಚಿಸಲಾಗಿದೆ.
2) ರಾಷ್ಟ್ರಧ್ವಜವನ್ನು ಬರೀ ಹಗಲು ಹೊತ್ತು (ಸೂರ್ಯೋದಯದ ಬಳಿಕ, ಸೂರ್ಯಾಸ್ತದ ಒಳಗೆ) ಮಾತ್ರ ಪ್ರದರ್ಶಿಸಬಹುದು ಎಂಬುದಾಗಿತ್ತು. ಈಗ 2022 ಜುಲೈ 20ರ ಅಧಿಸೂಚಿಯಂತೆ ರಾಷ್ಟ್ರಧ್ವಜವನ್ನು ಸಾರ್ವಜನಿಕವಾಗಿ ಮತ್ತು ಜನರು ತಮ್ಮ ಮನೆಗಳಲ್ಲಿ ಹಗಲು ಮತ್ತು ರಾತ್ರಿ ಕೂಡಾ ಹಾರಿಸಬಹುದು/ ಪ್ರದರ್ಶಿಸಬಹುದು ಎಂದು ಬದಲಾವಣೆ/ತಿದ್ದುಪಡಿ ಮಾಡಲಾಗಿದೆ.
ರಾಷ್ಟ್ರ ಗೀತೆ
ಭಾರತದ ರಾಷ್ಟ್ರಗೀತೆ ‘ಜನಗಣ ಮನ’ ಆಗಿದ್ದು, ಇದನ್ನು ನೊಬೆಲ್ ಪ್ರಶಸ್ತಿ ವಿಜೇತ ಕವಿ ಶ್ರೀ ರವೀಂದ್ರನಾಥ ಠಾಗೋರ್ ಬರೆದಿರುತ್ತಾರೆ. ಅವರು ಸಂಸ್ಕøತ ಮಿಶ್ರಿತ ಬಂಗಾಲಿಯಲ್ಲಿ ಈ ಗೀತೆಯನ್ನು ಬರೆದಿರುತ್ತಾರೆ. ಈ ಗೀತೆಯನ್ನು ಜನವರಿ 24, 1950 ರಲ್ಲಿ ಭಾರತ ಸರಕಾರ ಅಧಿಕೃತವಾಗಿ ರಾಷ್ಟ್ರ ಗೀತೆ ಎಂದು ಘೋಷಿಸಿತು. ಇದಕ್ಕೆ ಸಂಗೀತವನ್ನು ರಾಮ್ ಸಿಂಗ್ ಠಾಕೂರ್ ಅವರು ಅಳವಡಿಸಿದರು. ಈ ರಾಷ್ಟ್ರಗೀತೆಯನ್ನು ರಾಷ್ಟ್ರ ಧ್ವಜವನ್ನು ಹಾರಿಸಿದ ನಂತರ ಕನಿಷ್ಠ 48 ಸೆಕೆಂಡುಗಳವರೆಗೆ ಮತ್ತು ಗರಿಷ್ಠ 52 ಸೆಕೆಂಡುಗಳು ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರ ಗೀತೆಯನ್ನು ಹಾಡುವಾಗ ಎಲ್ಲರು ಎದ್ದು ನಿಂತು ಭಾರತಾಂಭೆಗೆ ವಂದಿಸಬೇಕು. ರಾಷ್ಟ್ರ ಗೀತೆ ಹಾಡುವಾಗ ಅಗೌರವ ತೋರಿಸುವುದು ಮತ್ತು ರಾಷ್ಟ್ರ ಗೀತೆ ಹಾಡುವುದನ್ನು ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾದವಾಗಿರುತ್ತದೆ. ರವೀಂದ್ರನಾಥ ಠಾಗೋರ್ ಅವರು 1911 ರಲ್ಲಿ ಬಂಗಾಳಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆ ಎಂದು ಪದ್ಯದ ಸಾಲುಗಳನ್ನು ಮಾತ್ರ ಆಯ್ದುಕೊಂಡು ಈ ರಾಷ್ಟ್ರ ಗೀತೆಯನ್ನು ರೂಪಿಸಲಾಯಿತು. ಭಾರತ ಇಬ್ಭಾಗವಾಗುವುದಕ್ಕೆ ಮೊದಲು ಬರೆದ ಗೀತೆ ಇದಾಗಿದ್ದರೂ, ಇದರಲ್ಲಿ ಬರುವ ರಾಷ್ಟ್ರದ ವಿವರ, ಪ್ರದೇಶಗಳ ಹೆಸರನ್ನು ಬದಲಾಯಿಸಲಾಗಿಲ್ಲ ಈ ಹೆಸರುಗಳು ವಿವಿಧ ಭಾರತೀಯ ಜನಾಂಗಗಳನ್ನು ಸೂಚಿಸುತ್ತದೆ. ಈ ಕಾರಣದಿಂದಲೇ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದಾಗ ಮೂಲ ಗೀತೆಯನ್ನು ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥವತ್ತಾಗಿ ಉಳಿಸಿಕೊಳ್ಳಲಾಗಿದೆ. ವೈವಿದ್ಯತೆಯಲ್ಲಿ ಏಕತೆ ಭಾರತೀಯ ಸಂಸ್ಕøತಿಯ ವೈಶಿಷ್ಟ್ಯ ಎಂಬುದೇ ಈ ರಾಷ್ಟ್ರಗೀತೆಯ ಸಾರಾಂಶವಾಗಿದೆ.
ಭಾರತದ ಸತ್ಪ್ರಜೆಗಳಾದ ನಮಗೆ ರಾಷ್ಟ್ರಗೀತೆಯನ್ನು ಕೇಳಿದ ತಕ್ಷಣ ನಮ್ಮ ನರನಾಡಿಗಳಲ್ಲಿ ರೋಮಾಂಚನವಾಗುತ್ತದೆ. ದೇಶ ಭಕ್ತಿಯ ಭಾವನೆ ಜಾಗೃತವಾಗಿ, ದೇಶ ಪ್ರೇಮ ಉಕ್ಕಿ ಹರಿಯುತ್ತದೆ. ನಮ್ಮ ಎಲ್ಲಾ ಭಾರತೀಯರನ್ನು ಒಟ್ಟು ಗೂಡಿಸುವ ಅದ್ಬುತ ಶಕ್ತಿ ಈ ರಾಷ್ಟ್ರ ಗೀತೆಗೆ ಇದೆ ಮತ್ತು ನಮ್ಮೆಲ್ಲರ ಏಕತೆಯ ಸಂಕೇತವಾಗಿರುವ ಈ ರಾಷ್ಟ್ರ ಗೀತೆ ಅತ್ಯಂತ ಶ್ರೇಷ್ಠ ಹಾಗೂ ಸುಂದರವಾಗಿ ಸಂಯೋಜನೆಗೊಂಡ ಗೀತೆಯಾಗಿದ್ದು ಜಗತ್ತಿನ 5 ಶ್ರೇಷ್ಠ ರಾಷ್ಟ್ರಗೀತೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜನಗಣ ಮನ ಎಂದು ಆರಂಭವಾಗಿ ಜಯಹೇ ಜಯಹೇ, ಜಯಹೇ, ಜಯ ಜಯ ಜಯ ಜಯಹೇ ಎಂದು ಕೊನೆಯಾಗುವ ಈ ರಾಷ್ಟ್ರ ಗೀತೆಗೆ ಮೊದಲು ಭಾರತ ಭಾಗ್ಯ ವಿಧಾಥ ಎಂಬ ಹೆಸರಿತ್ತು. ರಾಷ್ಟ್ರಗೀತೆಯ ಮೂಲವು ಸಂಸ್ಕøತ ಪದಗಳೇ ಹೆಚ್ಚಾಗಿರುವ ಬೆಂಗಾಲಿ ಯಲ್ಲಿಯೇ ಇದೆ ಮತ್ತು ನಂತರದ ದಿನಗಳಲ್ಲಿ ಹಿಂದಿ ಹಾಗೂ ಉರ್ದು ಭಾಷೆಗೆ ಅಬೀದ್ ಅಲಿ ಅವರು ಅನುವಾಧ ಮಾಡಿದರು. ಶ್ರೀ ರವೀಂದ್ರ ನಾಥ್ ಠಾಗೋರ್ ಅವರು ರಾಷ್ಟ್ರ ಗೀತೆಯನ್ನು ಇಂಗ್ಲೀಷ್‍ಗೆ ಅನುವಾದ ಮಾಡಿ ,ದಿ ಮಾರ್ನಿಂಗ್ ಸಾಂಗ್ ಆಪ್ ಇಂಡಿಯಾ ಎಂದೂ ಕರೆದರು. ಭಾರತದ ಸಂವಿಧಾನದ 51 ಎ ವಿಧಿಯ ಪ್ರಕಾರ ಸಂವಿಧಾನವನ್ನು ಪಾಲಿಸುವುದು, ರಾಷ್ಟ್ರ ಧ್ವಜವನ್ನು ಮತ್ತು ರಾಷ್ಟ್ರ ಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿರುತ್ತದೆ.
ಡಾ|| ಮುರಲೀಮೋಹನ್ ಚೂಂತಾರು
ಸಮಾದೇಷ್ಟರು
ಜಿಲ್ಲಾ ಗೃಹರಕ್ಷಕ ದಳ, ಮಂಗಳೂರು