ಶಾಲೆಗೆ ಪೀಠೋಪಕರಣ, ಶುದ್ಧ ಕುಡಿಯುವ ನೀರು‌ ಒದಗಿಸಿ

0

ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಹಕಾರದೊಂದಿಗೆ ಸೋಮವಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶಾಸಕರೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮ ಜರಗಿತು. ತಾ‌. ಪಂ‌. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಶಾಸಕರೊಡನೆ ತಮ್ಮ ಪರಿಸರದ ಸಮಸ್ಯೆಗಳ ಕುರಿತು ಮಾತನಾಡಿ ಅವುಗಳಿಗೆ ಪರಿಹಾರ ಕೇಳಿದರು.

ಕೊಡಿಯಾಲ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಬೇಕು. ನಮಗೆ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಯೊಬ್ಬ ಬೇಡಿಕೆ ಸಲ್ಲಿಸಿದಾಗ, ಸಮಸ್ಯೆ ಪರಿಹರಿಸುವ ಕುರಿತು ಶಾಸಕರು ಭರವಸೆ ನೀಡಿದರು. ಬೆಳ್ಳಾರೆ ಕೆ.ಪಿ.ಎಸ್. ನಲ್ಲಿ ಕೊಠಡಿಗಳ ಕೊರತೆ ಇದೆ. ಪಂಜ ಪ್ರೌಢಶಾಲೆಗೆ ಆವರಣ ಗೋಡೆಯ ಬೇಡಿಕೆ, ಮುರುಳ್ಯ ಶಾಲೆಯ ಬಳಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸುವ ಬಗ್ಗೆ, ಶಾಲೆಗಳಲ್ಲಿ ಲೈಬ್ರರಿ, ಕಂಪ್ಯೂಟರ್, ಪೀಠೋಪಕರಣ, ಶೌಚಾಲಯಗಳ ಅವಶ್ಯಕತೆ, ಶಾಲಾ ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಓಡಿಸುವ ಬಗ್ಗೆ ವಿದ್ಯಾರ್ಥಿಗಳು ಶಾಸಕರು ಮತ್ತು ಇತರ ಅಧಿಕಾರಿಗಳ ಜತೆ ಬೇಡಿಕೆ ಮಂಡಿಸಿದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು ಅಗತ್ಯ ಸೌಲಭ್ಯಗಳನ್ನು ಒದಿಗಿಸಲು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ. ಈ, ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ಕ್ರೈಂ ಎಸ್. ಐ. ಸರಸ್ವತಿ, ಕೆ.ಎಸ್.ಆರ್. ಟಿ.ಸಿ.‌ ಅಧಿಕಾರಿ ವಾಸುದೇವ, ಸಿ.ಡಿ.ಪಿ.ಓ. ಶೈಲಜಾ ಕುಕ್ಕುಜಡ್ಕ ಉಪಸ್ಥಿತರಿದ್ದ ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು. ಟ್ರಸ್ಟ್ ನ ಸುಳ್ಯ ತಾಲೂಕು ಸಂಯೋಜಕಿ ಅಮೃತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ವಿನೋದ್ ಸಹಕರಿಸಿದರು.