ಭಾರತೀಯ ಜೀವನ ಪದ್ಧತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ವಿಪ್ರ ಸಮಾಜ ಎಲ್ಲರ ಗೌರವಕ್ಕೆ ಪಾತ್ರವಾಗಿದೆ : ವಿದ್ಯಾಪ್ರಸನ್ನ ತೀರ್ಥರು
ಸಂಸ್ಕಾರದ ಹಂಚುವಿಕೆ ವಿಪ್ರ ಸಮಾಜದ ಹೊಣೆಯಾಗಿದೆ. ಭಾರತೀಯ ಜೀವನ ಪದ್ಧತಿಯಾದ ಯೋಗ, ಸಂಗೀತ, ನೃತ್ಯ, ಶ್ಲೋಕಗಳು ವಿದೇಶಗಳಲ್ಲೂ ಶ್ಲಾಘನೆಗೆ, ಗೌರವಕ್ಕೆ ಪಾತ್ರವಾಗಿದೆ. ಇದಕ್ಕೆ ಆದ್ಯತೆ ಕೊಟ್ಟು ಉಳಿಸಿ ಬೆಳೆಸಿಕೊಂಡು ಬಂದಿರುವುದು ವಿಪ್ರ ಸಮಾಜ. ಆದ್ದರಿಂದ ವಿಪ್ರ ಸಮಾಜ ಈ ಧ್ಯೇಯಗಳಿಂದ ಹೊರಬರಬಾರದು ಎಂದು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧೀಶರಾದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಇಂದು ಕಲ್ಮಡ್ಕದಲ್ಲಿ ಪಂಚವಟಿ ಸಭಾಭವನದಲ್ಲಿ ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ನಡೆದ ವಿಪ್ರ ಸಮಾವೇಶ- ೨೦೨೩ ಇದರ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ಮಾಡಿದರು.
“ಬ್ರಾಹ್ಮಣರು ಸ್ವಭಾವತಃ ಬುದ್ಧಿವಂತರು. ಅನುಷ್ಠಾನ ಮಾಡುವವರು. ಆದ್ದರಿಂದ ಧ್ಯಾನ, ಅನುಷ್ಠಾನಾದಿಗಳನ್ನು ಎಂದೂ ಬಿಡಬಾರದು” ಎಂದು ಅವರು ಕರೆ ನೀಡಿದರು.
ಸಮಾವೇಶವನ್ನು ಉದ್ಘಾಟಿಸಿದ ಪದ್ಮಶ್ರೀ ಗಿರೀಶ್ ಭಾರಧ್ವಾಜ್ ಮಾತನಾಡಿ, ಬ್ರಾಹ್ಮಣರು ತಮ್ಮತನವನ್ನು ಕಾಪಾಡಿಕೊಂಡು, ಇತರ ಸಮಾಜದವರನ್ನು ಪ್ರೀತಿಸಿಕೊಂಡು, ಎಲ್ಲರೂ ಗೌರವಿಸುವಂತೆ ಬಾಳಬೇಕು. ನಮ್ಮ ನಮ್ಮಲ್ಲೇ ಇರುವ ವಿಭಾಗಗಳ ನಡುವೆ ಐಕ್ಯತೆ ಸಾಧಿಸಬೇಕು. ಆ ಮೂಲಕ ಇಡೀ ಭಾರತೀಯ ಸಮಾಜ ಐಕ್ಯತೆಯಿಂದಿರುವಂತೆ ಮಾಡಬೇಕು” ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಉಪಾಧ್ಯಕ್ಷ ಮಹೇಶ್ ಕಜೆಯವರು ಮುಖ್ಯ ಅತಿಥಿಯಾಗಿದ್ದರು.
ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ಅಧ್ಯಕ್ಷ ರಾಮಕುಮಾರ್ ಹೆಬ್ಬಾರ್, ಪಂಜ ಸೀಮಾ ಗುರಿಕಾರ ಸತ್ಯನಾರಾಯಣ ಮೊಗ್ರ, ಸುಳ್ಯ ತಾಲೂಕು ಶ್ರೀಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಮಾಜ ಸೇವಾ ಸಂಘದ ರೆಂಜಾಳ ಕುಮಾರಸ್ವಾಮಿ, ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀನಿವಾಸ ಭಟ್ ಜಾಲ್ಸೂರು, ಕೂಟ ಮಹಾಜಗತ್ತು ಅಧ್ಯಕ್ಷ ವಿ.ಪರಮೇಶ್ವರ ಹೊಳ್ಳ, ರಾಮಚಂದ್ರ ಭಟ್ ಬರ್ಲಾಯಬೆಟ್ಟು ಅತಿಥಿಗಳಾಗಿದ್ದರು.
ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಾಯಿನಾರಾಯಣ ಕಲ್ಮಡ್ಕ ಪ್ರಾಸ್ತಾವಿಕ ಭಾಷಣಗೈದರು. ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ಕೃಷ್ಣ ರಾವ್ ಬ್ರಾಹ್ಮಣ ಸಂಘದ ಪರಿಚಯ ವಾಚಿಸಿದರು. ಶ್ರೀಕೃಷ್ಣ ಸೋಮಯಾಗಿ ಸ್ವಾಗತಿಸಿದರು. ಕೃಷ್ಣರಾವ್ ವಂದಿಸಿದರು. ಪ್ರಶಾಂತ್ ಜೋಗಿಬೆಟ್ಟು ಮತ್ತು ಶ್ರೀಮತಿ ಶ್ರೀರಕ್ಷಾ ಕಾರ್ಯಕ್ರಮ ನಿರೂಪಿಸಿದರು.