ಕಲ್ಮಡ್ಕದ ರಾಮ ಭಜನಾ ಮಂದಿರದಲ್ಲಿ ನಡೆದ ವಿಪ್ರ ಸಮಾವೇಶದಲ್ಲಿ ಸಮಾವೇಷೋದ್ಘೋಷ- ಹಿರಿಯ ವಿಪ್ರ ಸಾಧಕರಿಗೆ ಸನ್ಮಾನ

0

ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿರುವ ಬ್ರಾಹ್ಮಣ ಸಮಾಜ ಬಾಂಧವರು ಹಲವಾರು ಸಮಸ್ಯೆ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸಂಸಾರದಲ್ಲಿ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಕಲಹ ವಿವಾಹ ವಿಚ್ಛೇದನ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಸರ್ಕಾರಿ ಕೆಲಸ ಮಾಡುವ ಬ್ರಾಹ್ಮಣ ಸಮಾಜ ಬಾಂಧವರು ಭಯದ ವಾತಾವರಣದಲ್ಲಿ ಕರ್ತವ್ಯನಿರ್ವಹಿಸಬೇಕಾದ ಪರಿಸ್ಥಿತಿನಿರ್ಮಾಣವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಯವರು ಹೇಳಿದರು.

ಅವರು ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಕಲ್ಮಡ್ಕದ ರಾಮ ಭಜನಾ ಮಂದಿರದಲ್ಲಿ ನಡೆದ ವಿಪ್ರ ಸಮಾವೇಶದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ಸನಾತನ ಧರ್ಮದಲ್ಲಿ ಅತ್ಯಂತ ಶ್ರದ್ಧೆ ಮತ್ತು ವೈದಿಕ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಶ್ರೇಷ್ಠ ಸಮುದಾಯ ಬ್ರಾಹ್ಮಣ ಸಮುದಾಯವಾಗಿದೆ. ಸಾಮೂಹಿಕವಾಗಿ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸುವುದು ಬ್ರಾಹ್ಮಣ ಸಮುದಾಯದವರು. ಸಮುದಾಯದ ಮೇಲಾಗುತ್ತಿರುವ ಟೀಕೆಗಳು ಹಾಗೂ ಸಮಸ್ಯೆಯನ್ನು ಪರಿಹರಿಸುವುದರೊಂದಿಗೆ ನಮ್ಮ ಬೇಡಿಕೆಯನ್ನು ಸರಕಾರದ ಮಟ್ಟದಲ್ಲಿ ತಲುಪಿಸಬೇಕಾದರೆ ಇಂತಹ ಸಮಾವೇಶದ ಮೂಲಕ ಸಂಘಟನಾ ಶಕ್ತಿಯನ್ನು ಬಲಪಡಿಸಿಕೊಂಡು ಸರಕಾರದ ಗಮನ ಸೆಳೆಯಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.

ತಾಲೂಕು ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಭಟ್ ಕೊಡಂಕೇರಿ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಕಾರ್ಯಕಾರಿ ಸದಸ್ಯ ಹರಿಪ್ರಸಾದ್ ಪೆರಿಯಪ್ಪು, ಅದ್ವೈತ ಚಿಂತಕರಾದ ಕೆ.ಎನ್. ಪರಮೇಶ್ವರಯ್ಯ, ಕಲ್ಮಡ್ಕ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ
ಡಾ. ಬಾಲಸುಬ್ರಹ್ಮಣ್ಯ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಮಹೇಶ್ ಕಜೆ ನ್ಯಾಯವಾದಿಗಳು ವೇದಿಕೆಯಲ್ಲಿದ್ದರು.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ತಾಲೂಕಿನ ಸುಮಾರು 28 ಮಂದಿ ಹಿರಿಯ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಡಾ. ಬಾಲಸುಬ್ರಹ್ಮಣ್ಯ ಭಟ್ ವಿಪ್ರ ಸಮಾವೇಶದಲ್ಲಿ ಸಮುದಾಯದ ಪರ ತೆಗೆದುಕೊಂಡ ನಿರ್ಣಯವನ್ನು ಪ್ರಕಟಪಡಿಸಿದರು. ಸಂಚಾಲಕ ಸಾಯಿನಾರಾಯಣ ಕಲ್ಮಡ್ಕ ವಂದಿಸಿದರು. ಶ್ರೀರಕ್ಷಾ ಉಡುವೆಕೋಡಿ ಮತ್ತು ಪ್ರಶಾಂತ್ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.