ಸಹಕಾರಿ ಸಂಘದಿಂದ ಕೃಷಿಕರ ಬದುಕು ಹಸನು – ಶಶಿಕುಮಾರ್ ರೈ ಬಾಲ್ಯೋಟು
ಸಹಕಾರಿ ಸಂಘಗಳು ರೈತರ ಠೇವಣಾತಿಗಳನ್ನು ಪಡೆಯುವುದರೊಂದಿಗೆ ರೈತರಿಗೆ ಸಾಲ ಸೌಲಭ್ಯವನ್ನೂ ನೀಡುವ ಮುಖಾಂತರ ಕೃಷಿಕರ ಬದುಕನ್ನು ಹಸನು ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಕೃಷಿಕರ ಜೀವನ ಶೈಲಿಯೂ ಬದಲಾಗಿದೆ.
ಅಡಿಕೆ ಕೃಷಿಯೊಂದಿಗೆ ತೋಟದಲ್ಲಿ ಉಪಬೆಳೆಗಳನ್ನು ಬೆಳೆಯುವ ಮುಖಾಂತರ ಆದಾಯವನ್ನು ಕೂಡ ಹೆಚ್ಚು ಪಡೆಯುವಂತಾಗಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟು ಹೇಳಿದರು.

ಅವರು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಡಿ.21 ರಂದು ನಡೆದ ಅಡಿಕೆ ಮತ್ತು ಕೊಕ್ಕೊ ಬೆಳೆಗಳಲ್ಲಿ ಉತ್ತಮ ಬೇಸಾಯ ಪದ್ಧತಿಗಳು ಎಂಬ ಮಾಹಿತಿ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ವಹಿಸಿದ್ದರು.
ಭಾರತೀಯ ಕೃಷಿ ಸಂಶೋಧನಾ ಪರಿಷತ್ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾಂತೀಯ ಕ್ಷೇತ್ರ ವಿಟ್ಲ ಇದರ ಹಿರಿಯ ವಿಜ್ಞಾನಿ ಡಾ.ನಾಗರಾಜ ಎನ್.ಆರ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ ಅಡಿಕೆ ಉತ್ಪಾದನೆ,ನಾಟಿ,ಕೀಟಗಳ ಬಾಧೆ,ನಿರ್ವಹಣೆ ಮಾಡುವ ಕ್ರಮ,ವಿವಿಧ ತಳಿಗಳ ಬಗ್ಗೆ ಮತ್ತು ಅದರಿಂದ ಸಿಗುವ ಫಸಲಿನ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ಉಪಸ್ಥಿತರಿದ್ದರು.



ಗ್ರಂಥಪಾಲಕಿ ಲೀಲಾವತಿಯವರು ಪ್ರಾರ್ಥಿಸಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ಸ್ವಾಗತಿಸಿ,ಅಜಿತ್ ಕಾರ್ಯಕ್ರಮ ನಿರೂಪಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.

ಚೆಕ್ ಹಸ್ತಾಂತರ
ಚೈತನ್ಯ ವಿಮಾಯೋಜನೆಯ ಚೆಕ್ಕನ್ನು ಫಲಾನುಭವಿಯಾದ ನಂದಿಯವರಿಗೆ ಹಸ್ತಾಂತರಿಸಲಾಯಿತು.
ಆರೋಗ್ಯ ಇಲಾಖೆಯಿಂದ ಉಚಿತವಾಗಿ ಬಿಪಿ ,ಶುಗರ್ ಚೆಕಪ್
ಮಾಹಿತಿ ಕಾರ್ಯಾಗಾರಕ್ಕೆ ಬಂದವರಿಗೆ ಬೆಳ್ಳಾರೆ ಆರೋಗ್ಯ ಕೇಂದ್ರದ ಐವರ್ನಾಡು ಉಪಕೇಂದ್ರದ ವತಿಯಿಂದ ಉಚಿತವಾಗಿ ಬಿಪಿ,ಶುಗರ್ ಚೆಕಪ್ ನಡೆಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ರಮ್ಯಲತಾ,ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ವೀಣಾ,ಆಶಾ ಕಾರ್ಯಕರ್ತೆ ಶ್ರೀಮತಿ ಸುಂದರಿ ಪಿ.ಕೆ., ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಸಹಕರಿಸಿದರು