ವಿದ್ಯಾಬೋದಿನೀ ಪ್ರೌಢಶಾಲೆ ಬಾಳಿಲದಲ್ಲಿ ಸ್ಕೌಟ್ ಸಂಸ್ಥಾಪಕರಾದ ಬೆಡನ್ ಪವೋಲರ ಜನ್ಮದಿನ ಚಿಂತನಾ ದಿನದ ಅಂಗವಾಗಿ ಸ್ಕೌಟ್, ಗೈಡ್ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಯಿತು.
ಬೆಂಕಿರಹಿತ, ಬೆಂಕಿ ಸಹಿತ ಅಡುಗೆ ತಯಾರಿಸಲು ಸೂಚನೆ ನೀಡಲಾಗಿತ್ತು. ವಿದ್ಯಾರ್ಥಿಗಳು ಕ್ಯಾಬೇಜ್ ಬೋಂಡಾ, ಮಸಾಲೆ ಪುರಿ, ಗೋಬಿ ಮಂಚೂರಿ, ಬಟಾಟೆ ಕಬಾಬ್, ಫ್ರುಟ್ ಸಲಾಡ್, ಚರುಮುರಿ, ನೀರುಳ್ಳಿ ಬಜೆ, ಕೇಕ್, ಮೆಣಸಿನ ಬಜ್ಜಿ, ಶೇಂಗಾ ಚಿಕ್ಕಿ, ಕೊಬ್ಬರಿ ಮಿಠಾಯಿ, ಗುಲಾಬ್ ಜಾಮೂನ್, ಕ್ಷೀರ, ಬಟಾಟೆ ಪೋಡಿ, ರವೆ ಲಾಡು, ಸಪಾದ, ಪಾನೀಯಗಳಾದ ಕ್ಯಾರೆಟ್ ಜ್ಯೂಸ್, ಪುನರ್ಪುಳಿ ಜ್ಯೂಸ್, ಗಾಂಧಾರಿ ಮೆಣಸಿನ ಜ್ಯೂಸ್, ನಿಂಬೆ ಜ್ಯೂಸು, ಕಲ್ಲಂಗಡಿ ಜ್ಯೂಸ್ ಸೂಪು ಸೇರಿದಂತೆ ವಿವಿಧ ಆಹಾರ ತಿನಿಸುಗಳನ್ನು ತಯಾರಿಸುವುದರ ಮೂಲಕ ಅತ್ಯುತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಗೈಡ್ ವಿಭಾಗದಿಂದ 5 ದಳ, ಮತ್ತು ಸ್ಕೌಟ್ಸ್ ವಿಭಾಗದಿಂದ ಎಂಟು ದಳಗಳು ಭಾಗವಹಿಸಿದ್ದರು. ವಿದ್ಯಾಬೋದಿನೀ ಎಜುಕೇಶನಲ್ ಸೊಸೈಟಿ ಅಧ್ಯಕ್ಷರಾದ ರಾಧಾಕೃಷ್ಣರಾವ್, ಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್ ಸ್ಪರ್ಧೆಯನ್ನು ವೀಕ್ಷಿಸಿ ತಿಂಡಿ ತಿನಿಸುಗಳ ರುಚಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಯಶೋಧರ ಎನ್ ಮತ್ತು ಶಿಕ್ಷಕರು ಸ್ಪರ್ಧೆಯ ನಿರ್ಣಾಯಕರಾಗಿ ಸಹಕರಿಸಿದರು.