ಸೋಣಂಗೇರಿ ಅಂಗನವಾಡಿ ಕೇಂದ್ರದ ಕಟ್ಟಡ ತೆರವು ಕುರಿತು ಇಲಾಖಾ ಅಧಿಕಾರಿಗಳ ಸಭೆ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಅಂಗನವಾಡಿ ಕೇಂದ್ರದ ಕಟ್ಟಡವು ಕಳೆದ ಬಾರಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ರಸ್ತೆಯ ಅತ್ಯಂತ ತಳಮಟ್ಟಕ್ಕೆ ಹೋಗಿದ್ದು, ಪ್ರಸ್ತುತ ಕಟ್ಟಡ ಅಪಾಯದ ಸ್ಥಿತಿಯಲ್ಲಿದ್ದು, ಇದನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಿಸುವ ಕುರಿತಂತೆ ಈಗಾಗಲೇ ಶಿಶು ಅಭಿವೃದ್ಧಿ ಇಲಾಖೆಗೆ ಮನವಿ ಹೋಗಿದ್ದು, ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಸಭೆಯು ಫೆ.12ರಂದು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ನಾಲ್ಕು ಬದಿಗಳಲ್ಲಿ ಮಣ್ಣು ಹಾಕಲಾಗಿದ್ದು, ಅಂಗನವಾಡಿ ಕೇಂದ್ರ ರಸ್ತೆಗಿಂತ ಕೆಳಭಾಗದಲ್ಲಿ ಗುಂಡಿಯಲ್ಲಿದೆ. ಮಳೆಗಾಲದಲ್ಲಿ ಮಳೆನೀರು ಹರಿದುಹೋಗಲು ಸರಿಯಾದ ವ್ಯವಸ್ಥೆಯೂ ಇಲ್ಲದೆ ಪುಟಾಣಿ ಮಕ್ಕಳಿಗೆ ಸೂಕ್ತವಲ್ಲದ ಕಟ್ಟಡದಂತಾಗಿದೆ. ಈ ಬಗ್ಗೆ ನಾಗರಿಕರು ಸೇರಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಜಾಲ್ಸೂರು ಗ್ರಾಮ ಪಂಚಾಯತಿಯ ಮೂಲಕ ಸುಳ್ಯದ ಶಿಶಿ ಅಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು.


ಫೆ.12ರಂದು ಸುಳ್ಯದ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಮತಿ ಶೈಲಜ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಉಷಾ, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಈ ಸಭೆಯಲ್ಲಿ ಅಂಗನವಾಡಿ ಕಟ್ಟಡದ ಬಲಭಾಗದಲ್ಲಿ ತಡೆಗೋಡೆ ನಿರ್ಮಾಣದ ಅವಶ್ಯಕತೆಯಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಎನ್.ಆರ್.ಐ. ಅನುದಾನದ ಮೂಲಕ ಹಾಗೂ ಮಳೆಹಾನಿ ಅನುದಾನದಡಿಯಲ್ಲಿ ಕಾಮಗಾರಿ ನಡೆಸುವುದೆಂದು ತೀರ್ಮಾನಿಸಲಾಯಿತು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸುವುದೆಂದು ನಿರ್ಣಯಿಸಲಾಯಿತು.

ತಡೆಗೋಡೆ ನಿರ್ಮಾಣಕ್ಕೂ ಮೊದಲು ಅಂಗನವಾಡಿ ಕೇಂದ್ರದ ಬಳಿ ಮಣ್ಣು ತೆರವುಗೊಳಿಸಲು ಜಾಲ್ಸೂರು ಗ್ರಾ.ಪಂ.‌ಮನವಿ ನೀಡಲು ನಿರ್ಧರಿಸಲಾಯಿತು. ಮಳೆಗಾಲದಲ್ಲಿ ಮಳೆನೀರು ಹರಿದು ಹೋಗಲು ಸಮರ್ಪಕವಾಗಿ ಚರಂಡಿ ಗಾಗಿ ಸ್ಥಳದಾನಿಗಳಲ್ಲಿ ಕೇಳಿಕೊಂಡು, ಖಾಸಗಿ ಜಾಗದಲ್ಲಿ ಪೈಪ್ ಲೈನ್ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಈ ಎಲ್ಲಾ ಕೆಲಸ ಕಾರ್ಯಗಳಿಗೆ ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ನೀಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತೆಂದು ತಿಳಿದುಬಂದಿದೆ. ಈ ಎಲ್ಲಾ ಕೆಲಸ ಕಾರ್ಯಗಳು ನಡೆಯುವ ತನಕ ತಾತ್ಕಾಲಿಕವಾಗಿ ಪ್ರಸ್ತುತ ಅಂಗನವಾಡಿ ಕೇಂದ್ರದಲ್ಲೇ ಪೋಷಕರ ಒಪ್ಪಿಗೆಯ ಮೇರೆಗೆ ಮಕ್ಕಳಿಗೆ ಪಠ್ಯ ಚಟುವಟಿಕೆ ನಡೆಸುವುದೆಂದು ನಿರ್ಣಯಿಸಲಾಗಿದೆ ಎಂದು ತಿಳಿದುಬಂದಿದೆ.


ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾ.ಪಂ. ಸದಸ್ಯರುಗಳಾದ ಶ್ರೀಮತಿ ದೀಪ ಅಜಕಳಮೂಲೆ, ಶ್ರೀಮತಿ ಅಂಬಿಕಾ ಕುಕ್ಕಂದೂರು, ಗ್ರಾ.ಪಂ. ಸಿಬ್ಬಂದಿ ಚಿದಾನಂದ ಅರ್ಭಡ್ಕ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸುಮಂಗಲಿ ನಾಯಕ್, ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ತಂಗಮ್ಮ, ಮಹಾಬಲಗೌಡ ಕೆಳಗಿನಮನೆ, ನಿವೃತ್ತ ಶಿಕ್ಷಕ ಅರುಳಪ್ಪನ್ ಕುಕ್ಕಂದೂರು, ಸೋಣಂಗೇರಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾವತಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಪ್ರೇಮಾ ಸುರೇಶ್ ರೈ, ಉಪಾಧ್ಯಕ್ಷ ಚಿದಾನಂದ ಕುಕ್ಕಂದೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ವೇದಾವತಿ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ಮಿನಿಜೋಸ್, ಸಾಮಾಜಿಕ ಹೋರಾಟಗಾರ ಸತ್ಯಶಾಂತಿ ತ್ಯಾಗಮೂರ್ತಿ ಕುಕ್ಕಂದೂರು, ಅಂಗನವಾಡಿ ಬಾಲವಿಕಾಸ ಸಮಿತಿಯ ಸದಸ್ಯರುಗಳು, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು, ಹಾಗೂ ಊರವರು ಉಪಸ್ಥಿತರಿದ್ದರು.