ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆ

0

ಸೇವಾ ಮನೋಭಾವದಿಂದ ದೇವತಾ ಕಾರ್ಯದಲ್ಲಿ ತೊಡಗಿದರೆ ನಂಬಿಕೆಗೊಂದು ಅಗೋಚರ ಶಕ್ತಿ ಒದಗಲು ಸಾಧ್ಯ- ನ. ಸೀತಾರಾಮ

ಎಲ್ಲರೂ ಒಗ್ಗಟ್ಟಿನಿಂದ ಸೇವಾ ಮನೋಭಾವದಿಂದ ದೇವತಾ ಕಾರ್ಯದಲ್ಲಿ ತೊಡಗಿದರೆ ನಂಬಿಕೆಗೊಂದು ಅಗೋಚರ ಶಕ್ತಿ ಏರ್ಪಟ್ಟು ಇಷ್ಟಾರ್ಥ ಸಿದ್ಧಿಗೆ ಭಗವಂತನ ಅನುಗ್ರಹ ಒದಗಿ ಬರುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ ಹೇಳಿದರು.

ಅವರು ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ದೇವಸ್ಥಾನದ ಪ್ರಾಂಗಣದಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೇವಸ್ಥಾನದ ಅಭಿವೃದ್ಧಿ ಊರೊಂದರ ಅಭಿವೃದ್ಧಿಯ ದ್ಯೋತಕ. ಶಾಲೆಯ ಅಭಿವೃದ್ಧಿ ಆ ಊರ ಜನರ ಬೌದ್ಧಿಕ ಗುಣಮಟ್ಟಕ್ಕೆ ಸಾಕ್ಷಿ. ಗ್ರಾಮ ದೇವರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವರೂ ಏಕಮನಸ್ಸಿನಿಂದ ಒಗ್ಗೂಡಿ ಕಾರ್ಯಕ್ರಮ ಯಶಸ್ಸುಗೊಳಿಸುವಲ್ಲಿ ಶಕ್ತಿ ಮೀರಿ ದುಡಿಯಬೇಕು ಎಂದರು.

ಇದೇ ವೇಳೆ ಬ್ರಹ್ಮಕಲಶೋತ್ಸವ ಪ್ರಯುಕ್ತ ರಚಿಸಲಾದ ವಿವಿಧ ಸಹ ಸಮಿತಿಗಳ ಪ್ರಮುಖರ ಸಭೆ ಕರೆದು ಮುಂದಿನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಕೆಲವೊಂದು ಮಹತ್ವದ ಸಲಹೆ, ಸೂಚನೆಗಳನ್ನು ಸಭೆಯಲ್ಲಿ ನೀಡಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಕಣೆಮರಡ್ಕ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.