ರಂಗಮನೆಯಲ್ಲಿ ಜೀವನರಾಂ ಸಾರಥ್ಯದ 33 ನೇ ವರ್ಷದ ಚಿಣ್ಣರಮೇಳ ಉದ್ಘಾಟನೆ

0

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ರಂಗ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಸಾರಥ್ಯದಲ್ಲಿ 33 ನೇ ವರ್ಷದ ರಾಜ್ಯಮಟ್ಟದ ಮಕ್ಕಳ ಅಭಿನಯ ಶಿಬಿರ ‘ಚಿಣ್ಣರಮೇಳ 2024 ‘ ಎ.13 ರಂದು ದೀಪ ಬೆಳಗಿಸಿ ಚೆಂಡೆ ಬಾರಿಸುವುದರ ಮೂಲಕ ಉದ್ಘಾಟನೆಗೊಂಡಿತು.

ಹಿರಿಯ ರಂಗಕರ್ಮಿ , ನೀನಾಸಂ ಪದವೀಧರ ಸತ್ಯನಾರಾಯಣ ಕೊಡೇರಿ ಕುಂದಾಪುರ ಇವರು ಚಿಣ್ಣರಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ರೊ| ಆನಂದ ಖಂಡಿಗ, ಕಸ್ತೂರಿ ನರ್ಸರಿ ಮಾಲಕರಾದ ರೊ. ಮಧುಸೂದನ್ .ಕೆ , ದಂತ ವೈದ್ಯರಾದ ಡಾ. ವಿದ್ಯಾ ಶಾರದಾ, ರಂಗನಿರ್ದೇಶಕಿ ಗೀತಾ ಭಗೀರಥ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಡ್ರಾಮಾ ಜ್ಯೂನಿಯರ್ಸ್ ಸೀಸನ್ 5ರ ಫೈನಲಿಸ್ಟ್ ಬಾಲಪ್ರತಿಭೆ ರಿಷಿತ್ ರಾಜ್ ವಿಟ್ಲ ಇವರಿಂದ ಅಧ್ಭುತ ಡ್ರಾಮಾ ನಡೆಯಿತು.

ಡ್ರಾಮಾ ಜ್ಯೂನಿಯರ್ಸ್ ಸೀಸನ್ 2 ರ ಕು.ವೀಕ್ಷಾ ಪ್ರಾರ್ಥಿಸಿದರು.


ರಂಗಮನೆ ರೂವಾರಿ ಜೀವನ್ ರಾಂ ಸುಳ್ಯ ಸ್ವಾಗತಿಸಿದರು. ರವೀಶ್ ಪಡ್ಡಂಬೈಲು ವಂದಿಸಿದರು.

ಅಭಿನಯ ಪ್ರಧಾನವಾದ ಈ ಶಿಬಿರದಲ್ಲಿ ರಂಗಾಭಿನಯ, ಮಾತುಗಾರಿಕೆ, ರಂಗದಾಟಗಳು, ಮೂಕಾಭಿನಯ, ಓದುವ ಕ್ರಮ, ರಂಗಗೀತೆ, ಕಥಾಭಿನಯ, ಅಭಿನಯಗೀತೆ, ಸ್ಪಷ್ಟ ಕನ್ನಡ ಉಚ್ಛಾರಣೆ, ಸ್ವರಾನುಕರಣೆ, ಆತ್ಮವಿಶ್ವಾಸ ಮೂಡಿಸುವ ಗುಂಪು ಚಟುವಟಿಕೆಗಳು , ಜನಪದ ಸಂಗತಿಗಳು ಹಾಗೂ ಎಂಟು ನಿರ್ದೇಶಕರಿಂದ ಎಂಟು ಕಿರು ನಾಟಕಗಳ ತಯಾರಿ ಇರುತ್ತದೆ. ಮಧ್ಯೆ ಮಧ್ಯೆ ಕ್ರಾಫ್ಟ್-ಚಿತ್ರಕಲೆ, ಮುಖವರ್ಣಿಕೆಗಳೂ ಸೇರಿದಂತೆ ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ  ಪೂರಕವಾದ ಹತ್ತು ಹಲವು ವಿಚಾರಗಳು  ಶಿಬಿರದಲ್ಲಿ ಇರಲಿವೆ.

ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ತರಬೇತುದಾರರಾದ ಸತ್ಯನಾರಾಯಣ ಕೊಡೇರಿ, ಕಾಂತಾರ ಖ್ಯಾತಿಯ ಮೈಮ್ ರಾಮದಾಸ್, ನೀನಾಸಂ ಪದವೀಧರರಾದ ನವೀನ್ ಕಾಂಚನ, ಮಮತಾ ಕಲ್ಮಕಾರು, ಗೀತಾಕುಮಾರಿ ಮುಳ್ಯ, ಸಂಗೀತ ನಿರ್ದೇಶಕ ಭಗೀರಥ ಕುಮಟಾ, ರಂಗನಟಿ ಚೈತ್ರ ಖುಷಿ ಚನ್ನ ಪಟ್ಟಣ, ನಟನಾ ನಟ ವಿ.ಕ್ರಿ.ವಿಕಾಸ್ ಮೈಸೂರು, ಗಾಯಕಿ ವಿದುಷಿ ಸುಮನಾ ಪ್ರಸಾದ್ ಮೂಡುಬಿದ್ರೆ, ಕಲಾ ಶಿಕ್ಷಕರಾದ ಶಿವಗಿರಿ ಕಲ್ಲಡ್ಕ, ಶ್ರೀ ಹರಿ ಪೈಂದೋಡಿ, ಪ್ರಸನ್ನ ಐವರ್ನಾಡು, ಮಂಜು ಬೀರಮಂಗಲ, ಮಮತಾ ಕೆ.ಸಿ.ಆರ್.ಪಿ.,ರಂಗ ನಟಿಯರಾದ ವಸಂತಲಕ್ಷ್ಮೀ ಪುತ್ತೂರು, ಸುಶ್ಮಿತಾ ಮೋಹನ್, ಬಹುಮುಖ ಪ್ರತಿಭೆಯ ಮಾ| ಮನುಜ ನೇಹಿಗ ಮುಂತಾದವರು ಭಾಗವಹಿಸಲಿದ್ದಾರೆ.

ಎಪ್ರಿಲ್ 20 ರಂದು ಅಪರಾಹ್ನ 2.30 ಕ್ಕೆ ನಡೆಯುವ ಸಮಾರೋಪದಲ್ಲಿ ಮಕ್ಕಳ ನಾಟಕಗಳು ಹಾಗೂ ಬಹುಮುಖ ಪ್ರತಿಭಾ ಪ್ರದರ್ಶನವಿರುತ್ತದೆ.