ಪ್ರತಿ ವರ್ಷ “ಮೇ 12ರಂದು ವಿಶ್ವ ದಾದಿಯರ ದಿನ” ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಖ್ಯಾತ ದಾದಿಪ್ಲಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ “ವಿಶ್ವ ದಾದಿಯರ ದಿನ” ಎಂದು ಜಗತ್ತಿನಾದ್ಯಂತ ಮೇ 12ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 2018ರ ಆಚರಣೆಯ ಧ್ಯೇಯ ವಾಕ್ಯವೆಂದರೆ “ಆರೋಗ್ಯ ಪ್ರತಿ ಮನುಷ್ಯನ ಮೂಲಭೂತ ಹಕ್ಕು” ಎಂಬುದಾಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ದೊರಕಬೇಕು ಎಂಬುದೇ ಇದರ ಆಶಯವಾಗಿರುತ್ತದೆ. ದಾದಿಯರು ನೊಂದ ರೋಗಿಗಳ ಮನಸ್ಸಿನ ಭಾವನೆಗಳನ್ನು ವೈದ್ಯರಿಗೆ ತಲುಪಿಸುವ ಮಹತ್‍ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಅಂತಹ ಮಾನವೀಯ ಸೇವೆ ನೀಡುವ ದಾದಿಯರ ನೆನಪಿನಲ್ಲಿ ಈ “ದಾದಿಯರ ದಿನ”ವನ್ನು ಆಚರಿಸಲಾಗುತ್ತಿದೆ. 1965ರಲ್ಲಿ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಈ ದಿನದಂದು ಅಂತರಾಷ್ಟ್ರೀಯ ದಾದಿಯರ ಸಂಘ “ದಾದಿಯರ ದಿನದ ಕಿಟ್”ನ್ನು ಜಗತ್ತಿನಾದ್ಯಂತ ವಿತರಿಸುತ್ತಾರೆ. ಈ ಕಿಟ್‍ನಲ್ಲಿ ಆರೋಗ್ಯ ಮಾಹಿತಿ ಮತ್ತು ಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸುವ ವಸ್ತುಗಳನ್ನು ಮತ್ತು ಕಲಿಕಾ ಮಾಹಿತಿಗಳನ್ನು ನೀಡಿ ರೋಗ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡುವ ಕೆಲಸವನ್ನು ಮಾಡಲಾಗುತ್ತದೆ.
ಯಾರೀಕೆ ಪ್ಲಾರೆನ್ಸ್ ನೈಟಿಂಗೇಲ್ ?
1820ರ ಮೇ 12ರಂದು ಜನಿಸಿದ ಪ್ಲಾರೆನ್ಸ್ ನೈಟಿಂಗೇಲ್ ಇವರನ್ನು “ಆಧುನಿಕ ನರ್ಸಿಂಗ್‍ನ ಸಂಜಾತೆ” ಎಂದು ಕರೆಯುತ್ತಾರೆ. ಮೂಲತಃ ಇಟಲಿ ದೇಶದಲ್ಲಿ ಜನಿಸಿ ಬಳಿಕ ಬ್ರಿಟಿಷ್ ದೇಶದ ಸಂಜಾತೆಯಾದ ಈಕೆ 13 ಆಗಸ್ಟ್ 1910ರಲ್ಲಿ ಇಹಲೋಕ ತ್ಯಜಿಸಿದರು. ಸುಮಾರು 90 ವರ್ಷಗಳ ಪರಿಪೂರ್ಣ ಬದುಕು ಸವೆಸಿದ ಈಕೆ ತನ್ನ ಜೀವನವನ್ನು ಮನುಕುಲದ ಸೇವೆಗೆ ಮುಡಿಪಾಗಿಟ್ಟಿದ್ದಳು. ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಈಕೆ ವೃತ್ತಿಯಲ್ಲಿ ಅಂಕಿ ಅಂಶ ತಜ್ಞೆಯಾಗಿದ್ದಳು. ಆದರೆ ನೊಂದವರ ದೀನ ದಲಿತರ ಸಾಲಿಗೆ ಈಕೆ ಸಾಕ್ಷಾತ್ ದೇವತೆಯಾಗಿದ್ದಳು. ಕ್ರಿಮಿನ್ ಯುದ್ಧದ ಸಮಯದಲ್ಲಿ ನುರಿತ ದಾದಿಯರ ತಂಡದ ನಾಯಕಿಯಾಗಿ ಈಕೆ, ಗಾಯಗೊಂಡ ಸೈನಿಕರ ಸೇವೆಯನ್ನು ಹಗಲು ರಾತ್ರಿ ಮಾಡಿ ಹಲವಾರು ಸೈನಿಕರು ಜೀವ ಉಳಿಸಿದ್ದಳು. ರಾತ್ರಿ ಹೊತ್ತು ಯುದ್ಧ ಭೂಮಿಯಲ್ಲಿ ಕತ್ತಲಿನ ನಡುವೆ ದೀಪವನ್ನು ಹಿಡಿದುಕೊಂಡು ನೊಂದ ಮತ್ತು ಗಾಯಗೊಂಡ ಸೈನಿಕರ ಸೇವೆ ಮಾಡಿ “ಲೇಡಿ ಆಫ್ ಲ್ಯಾಂಪ್” ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದ್ದರು. ಈಕೆ ಮಾಡಿದ ನಿಸ್ವಾರ್ಥ ಸೇವೆಯಿಂದ ವಿಕ್ಟೋರಿಯಾ ಸಂಸ್ಕøತಿಯಲ್ಲಿ ದಾದಿಗಳಿಗೆ ವಿಶೇಷವಾದ ಸ್ಥಾನಮಾನ ದೊರೆತು ಬಹಳಷ್ಟು ಸೇವಾ ಮನೋಭಾವದ ಜನರು ನರ್ಸಿಂಗ್ ಕಲಿಕೆಗೆ ಮುಂದಾಗಿದ್ದರು ಎಂಬುದು ಗಮನಾರ್ಹ ಅಂಶ ಮತ್ತು ವೈದ್ಯಕೀಯ ಜಗತ್ತಿನಲ್ಲಿ ದಾದಿಯರಿಗೆ ಅತಿ ವಿಶಿಷ್ಟವಾದ ಸ್ಥಾನಮಾನ ಮುಂದೆ ಸಿಗುವಲ್ಲಿ ಸಹಕಾರಿಯಾಯಿತು ಎಂದರೂ ತಪ್ಪಾಗಲಿಕ್ಕಿಲ್ಲ.
ಪ್ಲಾರೆನ್ಸ್ ನೈಟಿಂಗೇಲ್ ಅವರು ಮಾಡಿದ ಸೇವೆಯನ್ನು ಜಗತ್ತಿನೆಲ್ಲೆಡೆ ಗುರುತಿಸಲಾಯಿತು. 1860ರಲ್ಲಿ “ನರ್ಸಿಂಗ್ ತರಬೇತಿಗಾಗಿ” ಲಂಡನ್‍ನ ಸೈಂಟ್ ಥಾಮಸ್ ಆಸ್ಪತ್ರೆಯಲ್ಲಿ ನೈಟಿಂಗೇಲ್ ನರ್ಸಿಂಗ್ ಶಾಲೆಯನ್ನು ಆರಂಭಿಸಲಾಯಿತು. ಈಗ ಇದು ಲಂಡನ್‍ನ ಕಿಂಗ್ಸ್ ಕಾಲೇಜಿನ ಅಧೀನದಲ್ಲಿದೆ. ನೈಟಿಂಗೇಲ್ ಅವರ ಸೇವೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ನರ್ಸಿಂಗ್ ವಿದ್ಯಾರ್ಥಿಯೂ ತನ್ನ ವಿದ್ಯಾರ್ಜನೆಯ ಬಳಿಕ “ನೈಟಿಂಗೇಲ್ ಪ್ರಮಾಣ” ಎಂಬ ಪ್ರತಿಜ್ಞಾ ವಿಧಿಯನ್ನು ಪೂರೈಸುತ್ತಾರೆ ಮತ್ತು ನರ್ಸಿಂಗ್ ಸೇವೆಯಲ್ಲಿ ಅತೀ ಹೆಚ್ಚಿನ ಸೇವೆಗೈದ ದಾದಿಯರಿಗೆ ನೈಟಿಂಗೇಲ್ ಮೆಡಲ್ ಅಥವಾ ಪದಕ ನೀಡಿ ಗೌರವಿಸಲಾಗುತ್ತದೆ. ಪ್ಲಾರೆನ್ಸ್ ನೈಟಿಂಗೇಲ್ ಅವರು ಉತ್ತಮ ಬರಹಗಾರ್ತಿ ಆಗಿದ್ದರು. ಮತ್ತು ನರ್ಸಿಂಗ್ ಸೇವೆಯ ಬಗ್ಗೆ ಹಲವಾರು ಪುಸ್ತಕಗಳನ್ನು ಸರಳವಾದ ಆಂಗ್ಲ ಭಾಷೆಯಲ್ಲಿ ಬರೆದಿರುತ್ತಾರೆ. ನೈಟಿಂಗೇಲ್ ಅವರು ಈಗಿನ ಇಟೆಲಿಯ “ಪ್ಲಾರೆನ್ಸ್” ಎಂಬ ನಗರದಲ್ಲಿ ಅತೀ ಶ್ರೀಮಂತ ಕುಟುಂಬದಲ್ಲಿ 1820ರಲ್ಲಿ ಜನಿಸಿದರು. 1821ರಲ್ಲಿ ಇಂಗ್ಲೆಂಡಿಗೆ ಬಂದು ನೆಲೆಸಿದರು 1844ರಲ್ಲಿ ನರ್ಸಿಂಗ್ ಕುಟುಂಬದ ವಿರೋಧದ ಹೊರತಾಗಿಯೂ ನರ್ಸಿಂಗ್ ಕಲಿಕೆಗೆ ಸೇರಿದರು. ಆಮೇಲೆ ನಡೆದಿದ್ದು ಇತಿಹಾಸ ಎಂದರೂ ಅತಿಶಯೋಕ್ತಿಯಲ್ಲ. 1912ರಲ್ಲಿ ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆ “ಪ್ಲಾರೆನ್ಸ್ ನೈಟಿಂಗೇಲ್” ಪದಕವನ್ನು ವಿಶಿಷ್ಟ ನರ್ಸಿಂಗ್ ಸೇವೆಯನ್ನು ಮಾಡಿದ ದಾದಿಯರಿಗೆ ನೀಡಲು ಆರಂಭಿಸಿತು. ಪ್ರತಿ ಎರಡು ವರ್ಷಕ್ಕೊಮ್ಮೆ ಈ ಪದಕ ನೀಡಲಾಗುತ್ತದೆ. ಭಾರತ ದೇಶದವರಿಗೆ 1973ರಿಂದ “ರಾಷ್ಟ್ರೀಯ ಪ್ಲಾರೆನ್ಸ್ ನೈಟಿಂಗೇಲ್ ಪದಕ” ಎಂಬುದಾಗಿ ರಾಷ್ಟ್ರಪತಿಗಳ ಪದಕ ನೀಡುವ ಸಂಪ್ರದಾಯ ಆರಂಭಿಸಲಾಯಿತು. ಪ್ರತಿ ವರ್ಷಕ್ಕೊಮ್ಮೆ ಈ ಪದಕ ನೀಡಲಾಗುತ್ತದೆ.
ವೈದ್ಯಕೀಯ ಸೇವೆಯಲ್ಲಿ ದಾದಿಯರ ಪಾತ್ರ ಏನು ?
ವೈದ್ಯಕೀಯ ಕ್ಷೇತ್ರ ಎನ್ನುವುದು ಮಾನವೀಯ ನೆಲೆಯಲ್ಲಿ ಸೇವೆ ಮಾಡುವ ಅತ್ಯಂತ ಪವಿತ್ರವಾದ ಮತ್ತು ವ್ಯಾವಹರಿಕ ಜಗತ್ತಿನಿಂದ ಹೊರಗಿರುವ ಅತ್ಯಂತ ಉನ್ನತ ಸ್ಥಾನದಲ್ಲಿರುವ ಸೇವಾ ಕ್ಷೇತ್ರವಾಗಿರುತ್ತದೆ. ವೈದ್ಯಕೀಯ ಸೇವೆಯನ್ನು ಪರಿಪೂರ್ಣವಾಗಿಸುವ ನಿಟ್ಟಿನಲ್ಲಿ ದಾದಿಯರು ಹಗಲು ರಾತ್ರಿ ವೈದ್ಯರ ಜೊತೆಗೂಡಿ ರೋಗಿಯನ್ನು ಆರೈಕೆ ಮಾಡುತ್ತಿರುತ್ತಾರೆ. ವೈದ್ಯರು ಸರ್ಜರಿ ಮಾಡಿದ ಬಳಿಕ ಹಲವಾರು ಸೂಚನೆಗಳನ್ನು ಹಾಗೂ ಔಷದಿಗಳನ್ನು ವೈದ್ಯಕೀಯ ಚೀಟಿಯಲ್ಲಿ ಮತ್ತು ವೈದ್ಯಕೀಯ ಭಾಷೆಯಲ್ಲಿ ಬರೆದಿರುತ್ತಾರೆ. ಇದನ್ನು ರೋಗಿಗಳು ಚಾಚೂ ತಪ್ಪದೇ ಪಾಲಿಸುವಂತೆ ಮಾಡುವಲ್ಲಿ ದಾದಿಯರು ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ವೈದ್ಯರು ನೀಡಿದ ಔಷಧಿಯನ್ನು ಕಾಲಕಾಲಕ್ಕೆ ನೀಡಿ ರೋಗಿ ಬೇಗನೆ ಗುಣಮುಖವಾಗುವಂತೆ ಮಾಡುವಲ್ಲಿ ದಾದಿಯರ ಪಾತ್ರ ಬಹಳ ಅವಶ್ಯಕ. ವೈದ್ಯರು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸುವಲ್ಲಿ ಮತ್ತು ಗಾಯಗೊಂಡ ರೋಗಿಗಳ ಡ್ರೆಸ್ಸಿಂಗ್ ಮಾಡುವಲ್ಲಿಯೂ ದಾದಿಯರ ಪಾತ್ರ ಬಹಳ ಅತ್ಯವಶ್ಯಕ. ರೋಗಿಗಳಿಗೆ ಮಾನಸಿಕ ಧೈರ್ಯ ತುಂಬಿ ಸಾಂತ್ವನ ಹೇಳಿ ಅವರು ಮಾನಸಿಕವಾಗಿ ಕುಗ್ಗಿಹೋಗದಂತೆ ನೋಡಿಕೊಳ್ಳುವಲ್ಲಿ ಗುರುತರ ಜವಾಬ್ದಾರಿ ದಾದಿಯರ ಮೇಲಿರುತ್ತದೆ. ಒಟ್ಟಿನಲ್ಲಿ ವೈದ್ಯರ ಸೇವೆ ಪರಿಪೂರ್ಣವಾಗುವಲ್ಲಿ ದಾರಿಯರು ನಿಸ್ವಾರ್ಥ ಸೇವೆ ಅತೀ ಅವಶ್ಯಕ ಎಂದರೂ ಅತಿಶಯೋಕ್ತಿಯಲ್ಲ.
ಕೊನೆಮಾತು :
ವೈದ್ಯಕೀಯ ಸೇವೆ ಎನ್ನುವುದು ವ್ಯಾವಹಾರಿಕ ಜಗತ್ತಿನ ಹೊರಗೆ ಇರುವ ಸೇವಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ವೈದ್ಯಕೀಯ ಸೇವೆ ಎನ್ನುವುದು ಇದೀಗ ಹೆಚ್ಚು ವ್ಯಾವಹಾರಿಕವಾಗುತ್ತಿರುವುದು ಬಹಳ ನೋವಿನ ಸಂಗತಿ. ಈ ವೈದ್ಯಕೀಯ ಸೇವೆ ಪರಿಪೂರ್ಣವಾಗಬೇಕಿದ್ದಲ್ಲಿ ದಾದಿಯರ ಸೇವೆ ಕೂಡ ಅತೀ ಅಗತ್ಯ. ಪರಿಪೂರ್ಣ ವೈದ್ಯಕೀಯ ಸೇವೆ ರೋಗಿಗೆ ತಲುಪುವಲ್ಲಿ ದಾದಿಯರು ಪ್ರಮುಖ ಭೂಮಿಕೆ ವಹಿಸುತ್ತಾರೆ. ವೈದ್ಯರ ಎಲ್ಲ ಸೂಚನೆಗಳನ್ನು ಮತ್ತು ಆದೇಶಗಳನ್ನು ರೋಗಿಗೆ ಮನದಟ್ಟು ಮಾಡಿಸುವಲ್ಲಿ ದಾದಿಯರು ಯಶಸ್ವಿಯಾದರೆ ಚಿಕಿತ್ಸೆ ಯಶಸ್ವಿಯಾಗುವುದರಲ್ಲಿ ಎರಡು ಮಾತೇ ಇಲ್ಲ. ಅದೇನೇ ಇರಲಿ ವೈದ್ಯಕೀಯ ಸೇವಾಕ್ಷೇತ್ರದಲ್ಲಿ ವೈದ್ಯರು ಮತ್ತು ದಾದಿಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲಾದರೂ ಒಂದು ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ. ನಂಬಿಕೆ, ಗೌರವ, ಆದರ್ಶ, ಪ್ರೀತಿ, ವಿಶ್ವಾಸಗಳೆಲ್ಲಾ ಕಳೆದು ಹೋಗಿ ಎಲ್ಲವೂ ವ್ಯಾವಹಾರಿಕವಾಗಿರುವ ಈ ಕಾಲಘಟ್ಟದಲ್ಲಿಯೂ ಪ್ರಾಮಾಣಿಕವಾಗಿ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡುವ ಎಲ್ಲಾ ದಾದಿಯರಿಗೆ ಈ ದಾದಿಯರ ದಿನದಂದು ತುಂಬು ಹೃದಯದಿಂದ ಶುಭ ಹಾರೈಸೋಣ. ಅದರಲ್ಲಿಯೇ ಮನುಕುಲದ ಒಳಿತು ಮತ್ತು ಉನ್ನತಿ ಅಡಗಿದೆ.
ಡಾ| ಮುರಲಿ ಮೋಹನ್ ಚೂಂತಾರು.