ಸಂಪಾಜೆ ಇಲಾಖಾಮಟ್ಟದ ಅಧಿಕಾರಿವರ್ಗದವರ ಉಪಸ್ಥಿತಿಯಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ

0

ಮಳೆಗಾಲದ ಪ್ರಾಕೃತಿಕ ವಿಕೋಪದ ಮುನ್ನೆಚ್ಚರಿಕೆಯ ಕುರಿತು ವಿಸ್ತ್ರತ ಚರ್ಚೆ

ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪದ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ವಿವಿಧ ಇಲಾಖಾ ಮಟ್ಟದ ಅಧಿಕಾರಿವರ್ಗದವರ ಉಪಸ್ಥಿತಿಯಲ್ಲಿ ವಿಪತ್ತು
ನಿರ್ವಹಣಾ ಸಮಿತಿ ಸಭೆಯು ದ.ಕ. ಸಂಪಾಜೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮೇ.14ರಂದು ನಡೆಯಿತು.

ಸಭೆಯಲ್ಲಿ ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳ ಕುರಿತು ಮುನ್ನೆಚ್ಚರಿಕೆಯ ಕುರಿತು ಚರ್ಚಿಸಲಾಯಿತು.


ಸಂಪಾಜೆ ಗ್ರಾಮದಲ್ಲಿ ಸಾರ್ವಜನಿಕರು ಅಪಾಯಕಾರಿ ಮರಗಳನ್ನು ಬುಡಸಹಿತ ತೆರವುಗೊಳಿಸಲು ಅರಣ್ಯ ಇಲಾಖೆಗೆ ಅರ್ಜಿಯನ್ನು ನೀಡುವುದು. ಹಾಗೂ ಮರದ ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವ ಕುರಿತು ಚರ್ಚಿಸಲಾಯಿತು.

ಮೆಸ್ಕಾಂ ಇಲಾಖೆಯವರು ವಿದ್ಯುತ್ ಲೈನ್ ಮೇಲೆ ಹಾದು ಹೋಗುವ ಲೈನ್ ನಲ್ಲಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವ ಕುರಿತು ಚರ್ಚಿಸಲಾಯಿತು. ಮಾಣಿ-ಮೈಸೂರು ರಾಷ್ತ್ರೀಯ ಹೆದ್ದಾರಿಯ ಪೇರಡ್ಕ ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ಚರಂಡಿಯ ನೀರು ತುಂಬಿ ತೊಂದರೆ ಉಂಟಾಗಿರುವುದರಿಂದ ಚರಂಡಿಯನ್ನು ಸರಿಪಡಿಸುವಂತೆ ರಾಷ್ತ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸುವುದೆಂದು ತೀರ್ಮಾನಿಸಲಾಯಿತು.

ಸಂಪಾಜೆ ಗ್ರಾಮದ ದರ್ಖಾಸ್ತು ಅಂಗನವಾಡಿ ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಚರಂಡಿಯಲ್ಲಿ ನೀರು ಹರಿದು ಹೋಗದೇ ಇರುವುದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಗಾಜು, ಬಾಟಲಿಗಳು ಹಾಗೂ ನಿರುಪಯುಕ್ತ ವಸ್ತುಗಳನ್ನು ಸಾರ್ವಜನಿಕ ಪರಿಸರದಲ್ಲಿ ಬಿಸಾಡುತ್ತಿರುವುದರಿಂದ ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿಹೋಗಿ ಚರಂಡಿ ಮುಚ್ಚಿ ಕೃತಕ ಪ್ರವಾಹ ಉಂಟಾಗಿ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಓಲ್ಗಾ ಡಿಸೋಜ, ವಿವಿಧ ಇಲಾಖೆಯ ಅಧಿಕಾರಿವರ್ಗದವರು ಉಪಸ್ಥಿತರಿದ್ದರು.