ಮೇ 19: ಅಡ್ಯಾರ್ ಗಾರ್ಡನ್‌ನಲ್ಲಿ ಕೆಸಿಎಫ್ ದಶಮಾನೋತ್ಸವ ಕಾರ್ಯಕ್ರಮ

0

ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ದಶಮಾನೋತ್ಸವ ಕಾರ್ಯಕ್ರಮವು ಮೇ 19ರಂದು ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಕೆಸಿಎಫ್ ಅಂತಾರಾಷ್ಟ್ರೀಯ ವೇದಿಕೆಯ ಅಧ್ಯಕ್ಷ ಡಿಪಿ ಯೂಸುಫ್ ಸಖಾಫಿ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ಸ್ಥಾಪನೆಗೊಂಡ ಕೆಸಿಎಫ್ ಇಂದು ಆರು ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಬ್ರಿಟನ್, ಮಲೇಷ್ಯಾದಲ್ಲೂ ಶಾಖೆಗಳನ್ನು ಹೊಂದಿವೆ. ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ ತೆರಳಿರುವ ಕನ್ನಡಿಗರ ಪೈಕಿ ಕೆಲವರು ರೋಗರುಜಿನಗಳಿಗೆ, ಕಾನೂನು ಕ್ರಮಗಳಿಗೆ ಗುರಿಯಾಗುವುದು, ಶೋಷಣೆಗೆ ಒಳಗಾಗುವುದು ಇತ್ಯಾದಿ ಸಮಸ್ಯೆಗೆ ಈಡಾಗುತ್ತಾರೆ.

ಇಂತಹ ಸಂದರ್ಭ ಕೆಸಿಎಫ್ ಮಧ್ಯಪ್ರವೇಶಿಸಿ ಜಾತಿ, ಮತ ಭೇದವಿಲ್ಲದೆ ಪರಿಹಾರ ಒದಗಿಸುವುದಲ್ಲದೆ ಜೈಲಿನಿಂದ ಬಿಡುಗಡೆಗೊಳಿಸಿ ಊರಿಗೆ ಕಳುಹಿಸುವುದು, ಮೃತದೇಹಗಳ ಅಂತ್ಯಸಂಸ್ಕಾರ ಮಾಡುವುದು ಇತ್ಯಾದಿಗಳಲ್ಲದೆ ಕೋವಿಡ್ ಸಂದರ್ಭ 15 ಚಾರ್ಟರ್ಡ್ ವಿಮಾನಗಳ ಮೂಲಕ ಅನೇಕ ಮಂದಿ ಮನೆಗೆ ಮರಳುವಂತೆ ಮಾಡಲಾಗಿದೆ ಎಂದರು.

ಕೆಸಿಎಫ್ ದಶಮಾನೋತ್ಸವ ಕಾರ್ಯಕ್ರಮವು ಮೇ 19ರಂದು ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ನಡೆಯಲಿದೆ. ದಶಮಾನೋತ್ಸವ ಪ್ರಯುಕ್ತ 10 ಜೋಡಿ ಸಾಮೂಹಿಕ ಮದುವೆ, 10 ಕುಟುಂಬಕ್ಕೆ ಮನೆ ನಿರ್ಮಾಣ, 10 ಸರಕಾರಿ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, 10 ಸಾರ್ವಜನಿಕ ಕೊಳವೆ ಬಾವಿ ಸಹಿತ ವಿವಿಧ 10 ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು.

ಕುಟುಂಬ ಸಂಗಮ, ವಿದ್ಯಾರ್ಥಿ ಸಮಾವೇಶ, ಎಕ್ಸಲೆನ್ಸಿ ಮೀಟ್, ಪ್ರತಿನಿಧಿ ಸಮ್ಮೇಳನ ನಡೆಯಲಿದೆ ಎಂದು ಡಿಪಿ ಯೂಸುಫ್ ಸಖಾಫಿ ಹೇಳಿದರು. ಮುಖ್ಯ ಅತಿಥಿಯಾಗಿ ಭಾರತದ ಗ್ರಾಂಡ್ ಮುಫ್ತಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ.

ಸುನ್ನಿ ಜಂ ಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಸಮಾವೇಶ ಉದ್ಘಾಟಿಸಲಿದ್ದಾರೆ. ವೌಲಾನಾ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಸೈಯದ್ ಕುಂಬೋಳ್ ತಂಙಳ್, ಸೈಯದ್ ಕೂರತ್ ತಂಙಳ್, ಸೈಯದ್ ಖಲೀಲ್ ತಂಙಳ್, ಡಾ. ಯೆನೆಪೊಯ ಅಬ್ದುಲ್ಲ ಕುಂಞಿ ಸಹಿತ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಶಾಫಿ ಸಅದಿ, ಕೆಸಿಎಫ್ ದಶಮಾನೋತ್ಸವ ಸಮ್ಮೇಳನ ಸಮಿತಿಯ ಅಧ್ಯಕ್ಷ ಹಾಜಿ ಅಬೂಬಕರ್ ರೈಸ್ಕೋ, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ, ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಸಮ್ಮೇಳನ ಸ್ವಾಗತ ಸಮಿತಿಯ ನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ, ಕರ್ನಾಟಕ ಮುಸ್ಲಿಂ ಜಮಾಅತ್ ದ,ಕ.ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಉಪಸ್ಥಿತರಿದ್ದರು.