ಅಡಿಕೆ ಕೃಷಿ ಉತ್ಪನ್ನ ಅಲ್ಲ, ಕಮರ್ಷಿಯಲ್ ಕ್ರಾಫ್ಟ್ ಆದ ಕಾರಣ ಹಳದಿರೋಗಕ್ಕೆ ಪರಿಹಾರ ಕಂಡುಕೊಳ್ಳಲು ಸರಕಾರ ಹಿಂದೆಬಿದ್ದಿದೆ – ಅಶೋಕ್ ಕುಮಾರ್ ರೈ
ಅಡಿಕೆ ಕೃಷಿ ಉತ್ಪನ್ನಕ್ಕೆ ಸೇರದೆ ಕಮರ್ಷಿಯಲ್ ಕ್ರಾಫ್ಟ್ ಎಂದು ವಿಭಾಗಿಸಲ್ಪಟ್ಟಿರುವುದರಿಂದ ಅಡಿಕೆ ಹಳದಿ ರೋಗಕ್ಕೆ ಯಾವುದೇ ಪರಿಹಾರವನ್ನು ಕಂಡುಕೊಳ್ಳಲು ಸರಕಾರ ಹಿಂದೆ ಬಿದ್ದಿದೆ. ನೆಟ್ಟನದಲ್ಲಿರುವ ಸಿ.ಪಿ.ಸಿ.ಆರ್.ಐ ಅಡಿಕೆ ಮತ್ತು ತೆಂಗು ಸಂಶೋಧನೆಗೆಂದು ಇರುವ ಸಂಸ್ತೆಯಾದರೂ ಕೃಷಿಕರಿಗೆ ಯಾವುದೇ ಪ್ರಯೋಜನವಿಲ್ಲ. ವಿಜ್ಞಾನಿಗಳಿಗೆ 2 ಲಕ್ಷ ಸಂಬಳ ಕೊಡುವುದು ಸರಕಾರಕ್ಕೆ ನಷ್ಟ. ಅಡಿಕೆಯನ್ನು ಕೃಷಿ ಉತ್ಪನ್ನಗಳ ಜೊತೆಗೆ ಸೇರಿಸಬೇಕೆಂದು ಕೇಂದ್ರಕ್ಕೆ ಮನವಿ ನೀಡಿದರೂ ಪ್ರಯೋಜನವಾಗಲಿಲ್ಲ. ಅಡಿಕೆಗೆ ಬರುವ ರೋಗಗಳಿಗೆ ಮತ್ತು ಬಳಕೆ ಮಾಡುವ ಬಗ್ಗೆಯೂ ಸಂಶೋಧನೆ ನಡೆಯಬೇಕಿದೆ. ಮಾಸ್ ನವರ ಬೇಡಿಕೆ ಸರಕಾರದಿದಿಂದ 5 ಕೋಟಿ ಪಾಲುಬಂಡವಾಳ ನೀಡುವಲ್ಲಿ ಶ್ರಮಿಸುತ್ತೇನೆ. ಹಾಗೆಯೇ 94 ಸಿ ಮೂಲಕ ಹಕ್ಕು ಪತ್ರ ದೊರೆಯದಿರುವ ಸಾರ್ವಜನಿಕರು ನನ್ನ ಬಳಿ ಬನ್ನಿ. ಯಾವುದೇ ಭ್ರಷ್ಟಾಚಾರ ಇಲ್ಲದೆ ಕೆಲಸ ಮಾಡಿಸಿಕೊಡುತ್ತೇನೆ
ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಜು. 09ರಂದು ಮಂಗಳೂರು ಕೃಷಿಕರ ಸಹಕಾರಿ ಸಂಘ, ನಿಯಮಿತ ಮಂಗಳೂರು ಇವರಿಂದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಕಾವು ಪ್ರಾ.ಕೃ.ಪ.ಸ.ಸಂಘದ ಆವರಣದಲ್ಲಿ ಅಡಿಕೆ ಖರೀದಿ ಕೇಂದ್ರದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಸಹಕಾರಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಸೀತಾರಾಮ ರೈಯವರು ಕೇವಲ 6 ತಿಂಗಳಲ್ಲಿ ಸಂಸ್ಥೆಯನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸಂಸ್ಥೆ ಖಂಡಿತ ಅಭಿವೃದ್ಧಿಯಾಗುತ್ತದೆ. ಮುಂದೆ ಜಿಲ್ಲೆಯ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ಮಾಸ್ ಶಾಖೆಗಳು ತೆರೆಯಲಿ. ಆ ಮೂಲಕ ಅನೇಕ ಮಂದಿಗೆ ಉದ್ಯೋಗ ಲಭಿಸಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವು ಸಿ.ಎ. ಬ್ಯಾಂಕಿನ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ವಹಿಸಿದ್ದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಮಾಸ್ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈಯವರು 2023-24ರಲ್ಲಿ ಮಾಸ್ ಸಂಸ್ಥೆ 167 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದೆ. ಬೈಂಕಪ್ಪಾಡಿಯಲ್ಲಿ 45 ಸೆಂಟ್ಸ್ ಜಾಗ ಖರೀದಿಸಿದ್ದೇವೆ. 3500 ಚದರಡಿಯ ಸ್ವಂತ ಕಟ್ಟಡವನ್ನು ನಿರ್ಮಿಸಲಿದ್ದೇವೆ. ಪ್ರಸ್ತುತ 18 ಮಂದಿ ನೌಕರರು, 30 ಮಂದಿ ಸಿಬ್ಬಂದಿಗಳು ಇದ್ದಾರೆ. ಸುಳ್ಯದಲ್ಲಿ 200 ಟನ್ ಗೋಡೌನ್ ಪಡೆದು ಅಡಿಕೆ ಸಂಸ್ಕರಣಾ ಘಟಕ ಸ್ಥಾಪಿಸಿ, ಪರಿಷ್ಕರಿಸಿದ ಅಡಿಕೆಯನ್ನು ನೇರವಾಗಿ ಮಹಾರಾಷ್ಟ್ರ, ಗುಜರಾತ್ ಗೆ ಮಾರಾಟ ಮಾಡಿ ಹೆಚ್ಚು ಲಾಭ ಗಳಿಸುವ ಯೋಜನೆಗಳನ್ನು ಹೊಂದಿದ್ದೇವೆ. ಅದೇ ರೀತಿ ರೈತರ ಮಕ್ಕಳಿಗೆ ಉದ್ಯೋಗವನ್ನು ನೀಡುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮಾಸಿಕ 13 ಸಾವಿರ ವೇತನದೊಂದಿಗೆ ತರಬೇತಿ ನೀಡಿ ಶಾಖೆಗಳನ್ನು ತೆರೆಯುವಾಗ ಉದ್ಯೋಗಾವಕಾಶವನ್ನು ನೀಡಲಾಗುವುದು. ಸಂಸ್ಥೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಸರಕಾರ 5 ಕೋಟಿಗಳ ಪಾಲು ಬಂಡವಾಳ ನೀಡಬೇಕೆಂದು ಸರಕಾರಕ್ಕೆ ಮನವಿ ನೀಡಿದ್ದೇವೆ. ಶಾಸಕರು ಸಹಕಾರ ನೀಡಬೇಕು ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಬಿ. ಜಯರಾಮ ರೈ ಮಾತನಾಡುತ್ತಾ ಈ ಭಾಗದ ರೈತರು ಎದುರಿಸುತ್ತಿರುವ ಹಳದಿ ಮತ್ತು ಎಳೆಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರವನ್ನು ಒದಗಿಸುವಂತೆ ಶಾಸಕರ ಮೂಲಕ ಸರಕಾರವನ್ನು ಒತ್ತಾಯಿಸಬೇಕಿದೆ ಎಂದರು. ಹರಿಯಡ್ಕ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಮಣಿಯಾಣಿ ಅತಿಥಿಯಾಗಿ ಭಾಗವಹಿಸಿದ್ದರು. ಮಾಸ್ ನಿರ್ದೇಶಕರಾದ ರಾಜಾರಾಮ ಭಟ್, ನಿತ್ಯಾನಂದ ಮುಂಡೋಡಿ, ಶ್ರೀಮತಿ ಸುಧಾ ಎಸ್ ರೈ, ಪುಷ್ಪರಾಜ್ ಅಡ್ಯಂತಾಯ, ಬೆಳ್ಳೆ ಶಿವಾಜಿ ಎಸ್. ಸುವರ್ಣ, ಮಾಸ್ ಸಿಇಒ ಟಿ. ಮಹಾಬಲೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾವು ಸಿ.ಎ. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಮೂರ್ತಿ ವಂದಿಸಿದರು. ಸವಣೂರು ಸಿ.ಎ. ಬ್ಯಾಂಕ್ ಸಿ.ಇ.ಒ ಚಂದ್ರಶೇಖರ ಮತ್ತು ಕಾವು ಸಿ.ಎ. ಬ್ಯಾಂಕ್ ಸಿಬ್ಬಂದಿ ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ಶಾಸಕ ಅಶೋಕ್ ಕುಮಾರ್ ರೈ ಮತ್ತು ಸೀತಾರಾಮ ರೈಯವರನ್ನು ಕಾವು ಸಿ.ಎ. ಬ್ಯಾಂಕ್ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.