ಸಾಹಿತ್ಯ ಸಂವಾದ ಮಾಲಿಕೆ ಕಾರ್ಯಕ್ರಮದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ ಆಶಯ
“ನನ್ನೊಳಗಿನ ದುಗುಡ, ನೋವು, ಅವಮಾನ ಸಿಟ್ಟುಗಳನ್ನು ಹೊರಹಾಕಲು ಕವಿತೆಯನ್ನು ಆಯ್ದುಕೊಂಡೆ. ನವ್ಯ ಕವಿತೆಯಲಿ ರೂಪಕಗಳು, ಪ್ರತಿಮೆಗಳು, ಸಂಕೇತಗಳನ್ನು ಬಳಸಿಕೊಂಡು ಬರೆಯಲಾಗುತ್ತದೆ. ನನಗೇನು ಹೇಳಬೇಕಿತ್ತೋ ಅದನ್ನು ಹೇಳಲು ಸಾಹಿತ್ಯವನ್ನು ನಾನು ಅಡಗುದಾಣವಾಗಿ ಉಪಯೋಗಿಸಿಕೊಂಡೆ. ಪ್ರತಿಯೊಬ್ಬ ಕವಿಗೂ ಬರವಣಿಗೆ ಎಂಬುದು ಅಡಗುದಾಣವೇ. ನಾನು ಅದನ್ನು ಹೆಚ್ಚು ಬಳಸಿಕೊಂಡೆ. ನಾನು ಬರೆದದ್ದು ಕಡಿಮೆ. ಕುವೆಂಪುರಂತವರೆಲ್ಲ ಎಷ್ಟೊಂದು ಬರೆದಿದ್ದಾರೆ. ನಾನು ಬರೆದುದುರಲ್ಲಿ ಪ್ರಕಟ ಆದದ್ದಿಕ್ಕಿಂತ ದುಪ್ಪಟ್ಟು ಹರಿದು ಬಿಸಾಡಿದ್ದೇನೆ. ನನಗೆ ಇಷ್ಟವಾಗದ್ದನ್ನು ಇಟ್ಟುಕೊಳ್ಳುವ ಜಾಯಮಾನ ನನ್ನದಲ್ಲ. ಅತೃಪ್ತಿ ನನ್ನ ಬರವಣಿಗೆಯ ಮೂಲ. ಯಾವ ಕವಿಗೆ ತಾನು ಬರೆದುದರ ಮೇಲೆ ತೃಪ್ತಿ ಬಂತೋ ಅಲ್ಲಿಗೆ ಆತನ ಬರವಣಿಗೆ ಮುಗಿಯಿತು ಅಂತ ಅರ್ಥ. ತನ್ನ ಬರವಣೆಗೆಯ ಮೇಲೆ ಅತೃಪ್ತಿ ಇದ್ದಾಗಲೇ ಬರಹಗಾರ ಬೆಳೆಯಲು ಸಾಧ್ಯ” ಎಂದು ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಹೇಳಿದರು.
ಅವರು ಇತ್ತೀಚೆಗೆ ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಆಶ್ರಯದಲ್ಲಿ ನಡೆದ ಸಾಹಿತ್ಯ ಸಂವಾದ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸುಳ್ಯದ ಕುರುಂಜಿಭಾಗ್‌ನಲ್ಲಿರುವ ಸಂಧ್ಯಾರಶ್ಮಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು “ಬರಹಗಾರನೊಬ್ಬ ಬರೆಯುವುದು ಒಂದೇ ಪದ್ಯ. ಅದಕ್ಕಿಂತ ಹೆಚ್ಚು ಆತ ಬರೆಯಲು ಸಾಧ್ಯವಿಲ್ಲ. ಒಂದೇ ವಸ್ತು ಅನೇಕ ರೀತಿಯಲ್ಲಿ ಕಾಣಿಸಿದಾಗ ಆತ ಬರೆಯಲು ಆರಂಭಿಸುತ್ತಾನೆ. ಒಬ್ಬ ಕವಿ ಒಂದು ಸತ್ಯದ ಅನೇಕ ಮುಖಗಳನ್ನು ದರ್ಶನ ಮಾಡಲು ಮಾಡುವ ಪ್ರಯತ್ನ ಮಾಡ್ತಾನೆ. ಸತ್ಯಕೆ ವಿಶ್ವಮುಖ. ಕವಿ ಬರೆಯುತ್ತಾ ಹೋದಂತೆ ಒಂದೇ ವಸ್ತು ಅನೇಕ ರೀತಿಯಲ್ಲಿ ಕಾಣಿಸಲಾರಂಭಿಸುತ್ತದೆ ಎಂದು ನುಡಿದರು. ಮುಂದುವರಿದು ಮಾತನಾಡಿದ ಅವರು “ನನಗೆ ನನ್ನ ಭಾವಗಳಿಂದ ಬಿಡುಗಡೆ ಬೇಕಿತ್ತು. ಅದಕ್ಕಾಗಿ ಬರೆದೆ. ನನ್ನ ನೋವು ನನ್ನ ಸಮಕಾಲೀನರಿಗೆ ನನ್ನ ಬಳಗಕ್ಕೆ ಇಷ್ಟ ಆಗ್ಬೇಕಿತ್ತು. ಯಾರಿಗೂ ಕರ್ನಾಟಕದ ಏಳು ಕೋಟಿ ಮಂದಿಗೂ ಇಷ್ಟ ಆಗಬೇಕೆಂಬ ಇಚ್ಛೆ ಇರುವುದಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಯಾವತ್ತಿಗೂ ಕವಿತೆ ಎಂಬುದು ಅಲ್ಪಸಂಖ್ಯಾತರಿಗೆ (ಕಡಿಮೆ ಜನರಿಗೆ) ಇರುವಂತದ್ದು, ಬಹುಸಂಖ್ಯಾತರಿಗೆ ಅಲ್ಲ. ಎಂಟು ನೂರಕ್ಕೂ ಮಿಕ್ಕಿ ಹಾಡು ಬರೆದಿದ್ದರೂ ಯಾರೂ ಅದನ್ನು ಪುಸ್ತಕದಲ್ಲಿ ಓದಿದವರಿಲ್ಲ. ಅವರಿಗೆ ನೆನಪು ಒಂದೇ – ‘ಮುನಿಸು ತರವೇ’ ಮಾತ್ರ. ಇದು ಕವಿಯ ದುರಂತವೋ ಸುಖಾಂತವೋ, ಓದದೇ ಇದ್ದದ್ದೇ ನನಗೆ ಸುಖವೋ – ನಾನೂ ಬರೀತಾ ಬಂದಿದ್ದೇನೆ. ಇದು ನನ್ನ ಒಳಗಿನ ಭಾವಗಳ ಪ್ರಕಟಣೆ ಅಷ್ಟೆ” ಎಂದು ಅವರು ಲಘುಧಾಟಿಯಲ್ಲಿ ನುಡಿದರು.
ಸಂಧ್ಯಾರಶ್ಮಿ ಸಾಹಿತ್ಯ ಸಂಘವು ಪ್ರತಿತಿಂಗಳು ಆಯ್ದ ಸಾಹಿತಿಗಳ ಸಾಹಿತ್ಯ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದು ಇದರಂಗವಾಗಿ ಸುಬ್ರಾಯ ಚೊಕ್ಕಾಡಿಯವರ ವ್ಯಕ್ತಿತ್ವ ಹಾಗೂ ಸಮಗ್ರ ಸಾಹಿತ್ಯ ಪರಿಚಯ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಚೊಕ್ಕಾಡಿಯವರನ್ನು ಹತ್ತಿರದಿಂದ ಕಂಡಿರುವ ನಾಡಿನ ಇನ್ನೋರ್ವ ಖ್ಯಾತ ಸಾಹಿತಿ, ವಿಶ್ರಾಂತ ಪ್ರಾಂಶುಪಾಲರಾಗಿರುವ ಡಾ.ಪ್ರಭಾಕರ ಶಿಶಿಲರು ಅವರ ವ್ಯಕ್ತಿತ್ವ ಪರಿಚಯವನ್ನು ಬಹಳ ಸೊಗಸಾಗಿ ಮಾಡಿದರು.
ಸುಳ್ಯದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ಪದವೀಧರ ಸಹಶಿಕ್ಷಕಿ ಶ್ರೀಮತಿ ಚಂದ್ರಮತಿ ಕೆ. ಅವರು ಚೊಕ್ಕಾಡಿಯವರ ಸಮಗ್ರ ಸಾಹಿತ್ಯದ ಬಗ್ಗೆ ಮಾತನಾಡಿ ಅವರ ಸಾಹಿತ್ಯದ ವಿಶೇಷತೆಯನ್ನು ಸಭೆಯ ಮುಂದಿರಿಸಿದರು.
ಕಾರ್ಯಕ್ರಮದುದ್ದಕ್ಕೂ ನಡುನಡುವೆ ಚೊಕ್ಕಾಡಿಯವರ ಕವಿತೆಗಳನ್ನು ಹಾಡಲಾಯಿತು. ಖ್ಯಾತ ಗಾಯಕ ಕೆ.ಆರ್.ಗೋಪಾಲಕೃಷ್ಣ ಹಾಗೂ ಅವರ ಶಿಷ್ಯೆಯಂದಿರಾದ ಶ್ರೀಮತಿ ಎಂ.ವಿ.ಗಿರಿಜಾ ಹಾಗೂ ಶ್ರೀಮತಿ ಸತ್ಯವತಿ ಎಸ್. ಅವರುಗಳು ಗಾಯನ ಕಾರ್ಯಕ್ರಮ ನಡೆಸಿಕೊಟ್ಟು, ಕವಿಗಳ ಕವಿತೆಗೆ ಜೀವ ತುಂಬಿದರು ಮತ್ತು ಸಭಾಸದರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ತೊಡಗುವಂತೆ ಮಾಡಿದರು. ಕವಿಗಳ ಸಮಕ್ಷಮದಲ್ಲಿ ಗೀತೆಗಾಯನ ನಡೆದಿದ್ದು, ಪ್ರತಿಯೊಂದು ಗೀತೆಯೂ ಯಾವ ಸಂದರ್ಭದಲ್ಲಿ ಹುಟ್ಟಿಕೊಂಡಿತು, ಅದರ ಹಿನ್ನೆಲೆ ಏನು ಎಂಬ ಬಗ್ಗೆ ಕವಿ ಚೊಕ್ಕಾಡಿಯವರು ಸಭೆಗೆ ಚುಟುಕಾಗಿ ವಿವರಿಸಿದರು. ಇದು ಸಾಹಿತ್ಯಾಸಕ್ತರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ್ ವಹಿಸಿದ್ದರು. ಸಂಘದ ಪೋಷಕಾಧ್ಯಕ್ಷರಾದ ಡಾ.ಎಸ್.ರಂಗಯ್ಯರು ಕಾರ್ಯಕ್ರಮದಲ್ಲಿ ಔಪಚಾರಿಕವಾಗಿ ಮಾತನಾಡಿ, ಸಮಾಜದಲ್ಲಿ ಸಾಹಿತ್ಯ ಚಟುವಟಿಕೆಗಳ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಹಾಗೂ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ನಿರೂಪಿಸಿದರು. ಸಂಘದ ಇನ್ನೋರ್ವ ಅಧ್ಯಕ್ಷರಾದ ರಾಮಚಂದ್ರ ಪಲ್ಲತ್ತಡ್ಕ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಸಾಹಿತಿ ಚೊಕ್ಕಾಡಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಚೊಕ್ಕಾಡಿಯವರ ಹಾಗೂ ಗಾಯಕ ಕೆ.ಆರ್‌ಜಿ.ಯವರ ಅಭಿಮಾನಿಗಳು ಕಾರ್ಯಕ್ರಮಕ್ಕೆ ದೂರದೂರುಗಳಿಂದ ಬಂದು ಭಾಗವಹಿಸಿ ಆನಂದಿಸಿದ್ದು ವಿಶೇಷವಾಗಿತ್ತು