ರಂಗಮನೆಯಲ್ಲಿ ಯಕ್ಷಗಾನ ನಾಟ್ಯ ಹಿಮ್ಮೇಳ ತರಗತಿ ಉದ್ಘಾಟನೆ
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ, ಸುಜನಾ ಯಕ್ಷಗಾನ ಶಾಲೆಯ ಆಶ್ರಯದಲ್ಲಿ
2024-25 ನೇ ಸಾಲಿನ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಯು ರಂಗಮನೆಯ ಅಧ್ಯಕ್ಷರಾದ ಡಾ.ಜೀವನ್ ರಾಂ ಸುಳ್ಯ ರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು.
ಹಿರಿಯ ಯಕ್ಷಗಾನ ಹಿಮ್ಮೇಳ ಗುರುಗಳಾದ ವಳಕುಂಜ ಕುಮಾರ ಸುಬ್ಯಹ್ಮಣ್ಯ ಇವರು ದೀಪಬೆಳಗಿ ಉದ್ಘಾಟಿಸಿ ” ಪರಿಶ್ರಮ ಇಲ್ಲದೆ ಯಾವ ಕಲೆಯೂ ಒಲಿಯದು. ಯಕ್ಷಗಾನ ನಾಟಕ ನೃತ್ಯ ಕಲಿಕೆಗೆ ರಂಗಮನೆ ಯೋಗ್ಯ ಸ್ಥಳ. ರಂಗಮನೆಯಲ್ಲಿ ಹಿಮ್ಮೇಳ ತರಗತಿ ನಡೆಸಲು ನನಗೂ ಹೆಮ್ಮೆ” ಎಂದರು. ನಾಟ್ಯ ಗುರು ಶ್ರೀಮತಿ ಸರೋಜಿನಿ ಬನಾರಿ ಮಾತನಾಡಿ “ಯಕ್ಷಗಾನ ಅಭ್ಯಾಸ ಮಾಡುವುದು ಮಕ್ಕಳಿಗೆ ಶೈಕ್ಷಣಿಕವಾಗಿಯೂ ಪೂರಕ” ಎಂದರು.
ಅಧ್ಯಕ್ಷ ಜೀವನ್ ರಾಂ ಸುಳ್ಯರು ಮಾತನಾಡಿ ” ಯುವಜನರನ್ನು ಯಕ್ಷಗಾನದತ್ತ ಸೆಳೆಯುವ ಅನಿವಾರ್ಯತೆ ಇದೆ. ದೇಶೀಯ ಸಾಂಸ್ಕೃತಿಕ ಸಂಗತಿಗಳು ಯಾವುದೇ ಆಗಿರಲಿ, ಅದನ್ನು ತರಬೇತಿ ಮತ್ತು ಪ್ರದರ್ಶನ ನೀಡುವವರಿಗೆ ರಂಗಮನೆಯಲ್ಲಿ ಉಚಿತವಾಗಿ ಅವಕಾಶ ಇದೆ. ಈ ವರ್ಷ ಯಕ್ಷೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಯಕ್ಷದ್ರೋಣ ಬಣ್ಣದ ಮಾಲಿಂಗರ ಯಕ್ಷಪ್ರತಿಮೆಯ ಮರುನಿರ್ಮಾಣದ ಕೆಲಸವೂ ನಡೆಯುತ್ತಿದೆ. ಎಲ್ಲರ ಸಹಕಾರ ಅಗತ್ಯ” ಎಂದರು. ಅತಿಥಿಗಳಾಗಿ ಬಿಎಸ್ಎನ್ಎಲ್ ನ ಗೋಪಾಕೃಷ್ಣ ಭಟ್, ಸುಳ್ಯ ಸಿ ಆರ್ ಪಿ ಮಮತ ಕೆ. ಭಾಗವಹಿಸಿದ್ದರು. ಪೋಷಕರಾದ ಶ್ರೀಮತಿ ಪದ್ಮಿನಿ ಭಟ್, ಜಯರಾಮ ಮರ್ಕಂಜ, ಶ್ರೀನಿಧಿ ಕೆ.ತೊಡಿಕಾನ, ಶ್ರೀಮತಿ ಅನಿತಾ ಕುಮಾರಿ, ಶ್ರೀಮತಿ ಜಯಶ್ರೀ ಬೆಟ್ಟಂಪಾಡಿ ಮುಂತಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ರಂಗಮನೆಯ ಹಿಮ್ಮೇಳ ವಿದ್ಯಾರ್ಥಿಗಳು ಚೆಂಡೆ ಮದ್ದಳೆ ನುಡಿಸಿ ಪ್ರಾರ್ಥಿಸಿದರು. ರಂಗಮನೆಯಲ್ಲಿ ಈ ವರ್ಷ ಹಿಮ್ಮೇಳ ಮತ್ತು ನಾಟ್ಯ ತರಗತಿಯಲ್ಲಿ ಒಟ್ಟು ನಲವತ್ತೈದು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
ಕಲಾಶಿಕ್ಷಕ ಶ್ರೀಹರಿ ಪೈಂದೋಡಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.