ಖ್ಯಾತ ಯಕ್ಷ ಕಲಾವಿದರಾದ ಜಬ್ಬಾರ್ ಸಮೊ ಹಾಗೂ ಬಣ್ಣದ ಸುಬ್ರಾಯರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

0

ಖ್ಯಾತ ಯಕ್ಷ ಕಲಾವಿದರುಗಳಾದ ಜಬ್ಬಾರ್ ಸಮೊ ರಿಗೆ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಬಣ್ಣದ ಸುಬ್ರಾಯರಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ನೀಡಲು ಕರ್ನಾಟಕ ಯಕ್ಷಗಾನ ಅಕಾಡೆಮಿ ನಿರ್ಧರಿಸಿದೆ.

ನಿನ್ನೆ ಬೆಂಗಳೂರಿನ ಕನ್ನಡ ಭವನದಲ್ಲಿ ನಡೆದ ಯಕ್ಷಗಾನ ಅಕಾಡೆಮಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿಯವರು ಪತ್ರಕರ್ತರಿಗೆ ತಿಳಿಸಿ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು.
ಯಕ್ಷಗಾನ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಐವರು ಹಿರಿಯ ಕಲಾವಿದರಿಗೆ 2023 ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗುತ್ತಿದ್ದು, ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸ ಮೊ ಅದರಲ್ಲಿ ಸೇರಿದ್ದಾರೆ. 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ.

ಯಕ್ಷಗಾನ ಹಾಗೂ ಮೂಡಲಪಾಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ 10 ಮಂದಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದ್ದು, ಯಕ್ಷಗಾನದ ಬಣ್ಣದ ವೇಷಧಾರಿಯಾಗಿ ತಂದೆ ಬಣ್ಣದ ಮಾಲಿಂಗರಂತೆಯೇ ಹೆಸರು ಮಾಡಿರುವ ಬಣ್ಣದ ಸುಬ್ರಾಯರು ಅದರಲ್ಲಿ ಸೇರಿದ್ದಾರೆ. ಈ ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ.

ನವೆಂಬರ್ ಎರಡನೇ ವಾರದಲ್ಲಿ ಮಂಗಳೂರು ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.