ಪ್ರವಾಸೋದ್ಯಮಕ್ಕಾಗಿಯಾದರೂ ಇದನ್ನು ಸಂರಕ್ಷಿಸಬೇಡವೇ ?
ಸುಳ್ಯದ ಅರಂಬೂರಿನಲ್ಕಿ ಪಯಸ್ವಿನಿ ನದಿಗೆ ಕಟ್ಟಲಾಗಿರುವ, ರಾಜ್ಯದ ಪ್ರಥಮ ತೂಗುಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಇತಿಹಾಸ ಬರೆದಿರುವ ತೂಗುಸೇತುವೆ ಇಂದು ಬಳಕೆ ಮತ್ತು ನಿರ್ವಹಣೆ ಇಲ್ಲದೆ ಗತಿತಿಹಾಸದ ಪುಟ ಸೇರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಸೇತುವೆಯ ಮುಖ್ಯದ್ವಾರವನ್ನು ಮಳೆಗಾಲದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆಗಾಗಿ ತಾತ್ಕಾಲಿಕ ಬಂದ್ ಮಾಡಲಾಗಿತ್ತು. ಆದರೆ ಇದೀಗ ಮಳೆಗಾಲ ದೂರವಾಗುತ್ತಿದ್ದರೂ ಅಂದು ಹಾಕಿದ್ದ ಸೂಚನಾ ಫಲಕವನ್ನು ಇದುವರೆಗೆ ತೆರವುಗೊಳಿಸಿಲ್ಲ. ಸೇತುವೆಯ ಮುಖ್ಯದ್ವಾರದಲ್ಲಿ ಕಾಡುಬಳ್ಳಿಗಳು ಸೇತುವೆಯ ಸಪೋರ್ಟ್ ತಂತಿಗಳ ಸರಳಿಗೆ ಆವರಿಸಿದ್ದು ತಂತಿ ತುಕ್ಕು ಹಿಡಿದ ರೀತಿಯಲ್ಲಿ ಕಂಡುಬರುತ್ತಿದೆ. ಇದರ ಸಪೋರ್ಟ್ ಪಿಲ್ಲರ್‌ಗಳು ಕೂಡ ಬಿರುಕು ಬಿಟ್ಟಿದ್ದು ಈ ಸೇತುವೆಯು ಅಳಿವಿನಂಚಿಗೆ ಸರಿಯುತ್ತಿರುವುದನ್ನು ಸಾರುವಂತಿದೆ.
೧೯೮೯ರಲ್ಲಿ ತೂಗು ಸೇತುವೆಗಳ ಸರದಾರರೆಂದು ಕರೆಯಲ್ಪಡುತ್ತಿರುವ ಇಂಜಿನಿಯರ್ ಗಿರೀಶ್ ಭಾರದ್ವಾಜರು ಊರವರ ಬೇಡಿಕೆ, ಉತ್ತೇಜನ ಮತ್ತು ಸಹಕಾರದಿಂದ ಪ್ರಥಮವಾಗಿ ನಿರ್ಮಿಸಿದ ತೂಗುಸೇತುವೆ ಈ ಅರಂಬೂರು ತೂಗುಸೇತುವೆ.
ಆ ದಿನಗಳಲ್ಲಿ ಸ್ಥಳೀಯ ನಿವಾಸಿಗಳು ನದಿ ದಾಟಲು ಕಷ್ಟ ಪಡುತ್ತಿದ್ದ ಕಾಲದಲ್ಲಿ 1 ಲಕ್ಷ 15 ಸಾವಿರ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಮಾಣಿ-ಮೈಸೂರು ಹೆದ್ದಾರಿಗೆ ತಾಗಿಕೊಂಡಿರುವ ಈ ಸೇತುವೆಯ ಸೌಂದರ್ಯವನ್ನು ಸವಿಯಲು ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರು. ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಲವರ್ಸ್ ಪಾಯಿಂಟ್ ಆಗಿಯೂ ಇದು ಗುರುತಿಸಲ್ಪಟ್ಟಿತ್ತು. ಸುಳ್ಯಕ್ಕೆ ಪರವೂರಿನವರಾದರೂ ನೆಂಟರಾಗಿ ಬಂದರೆ ಅವರಿಗೆ ತೋರಿಸುವ ಪ್ರೇಕ್ಷಣೀಯ ಸ್ಥಳ ಕೂಡ ಇದಾಗಿತ್ತು.
ಈಗ ರಾಷ್ಟ್ರಮಟ್ಟದಲ್ಲಿ ತೂಗುಸೇತುವೆಗಳ ಸರದಾರ ಎಂದು ಗುರುತಿಸಲ್ಪಟ್ಟಿರುವ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜರ ತೂಗುಸೇತುವೆ ನಿರ್ಮಾಣದ ಪಯಣ ಕೂಡ ಆರಂಭವಾದುದು ಇದೇ ಅರಂಬೂರು ತೂಗುಸೇತುವೆ ನಿರ್ಮಾಣದ ಮೂಲಕ.
ಆದರೆ ಕೆಲ ವರ್ಷಗಳ ಹಿಂದೆ ಇಲ್ಲಿ ದೊಡ್ಡ ಕಾಂಕ್ರೀಟ್ ಸೇತುವೆ ನಿರ್ಮಾಣವಾದುದರಿಂದ ಈ ತೂಗುಸೇತುವೆಯನ್ನು ಬಳಸುವವರಿಲ್ಲದಂತಾಗಿದೆ. ಜನ ಬಳಸದಿದ್ದರೂ ತೂಗುಸೇತುವೆಯನ್ನು ಸರಿಯಾಗಿರುವಂತೆ ನಿರ್ವಹಣೆ ಮಾಡುವುದು ಗ್ರಾಮ ಪಂಚಾಯತ್ ಗೆ ಹೊರೆ ಎನಿಸಿರಲೂಬಹುದು.
ಆದರೆ ಈ ಸುಂದರವಾಗಿದ್ದ ತೂಗುಸೇತುವೆ ಸುಳ್ಯ ಒಂದು ಕಾಲದ ಇತಿಹಾಸವನ್ನು ಕಟ್ಟಿಕೊಡುವ ಪ್ರಚ್ಯ ರಚನೆಯಾದುದರಿಂದ ಹಾಗೂ ಉತ್ತಮ ರೀತಿಯಲ್ಲಿ ಆಕರ್ಷಕಗೊಳಿಸಿ ಪುನರ್ರಚಿಸಿದರೆ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಬಹುದಾದುದರಿಂದ ಗ್ರಾಮ ಪಂಚಾಯತ್ ಇದನ್ನು ಉಳಿಸಿಕೊಂಡು ನಿರ್ವಹಣೆ ಮಾಡಿಕೊಂಡುಬರಬೇಕೆಂದು ಜನರ ಅಭಿಪ್ರಾಯವಾಗಿದೆ.