ರಾತ್ರಿ 8 ಗಂಟೆ ತನಕ ನ್ಯಾಯಬೆಲೆ ಅಂಗಡಿ ತೆರೆದಿರಲಿ : ಸರಕಾರದ ಸುತ್ತೋಲೆ ಪಾಲನೆ ಯಾಕಿಲ್ಲ?

0

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚೆ

ವಾರಕ್ಕೆ ಒಂದು ದಿನ, ಇಲ್ಲವೋ ತಿಂಗಳಲ್ಲಿ ಕನಿಷ್ಠ ಎರಡು ದಿನವಾದರೂ ರಾತ್ರಿ 8 ಗಂಟೆ ತನಕ ನ್ಯಾಯಬೆಲೆ ಅಂಗಡಿ ತೆರೆದಿರಲಿ – ಇದರಿಂದ ಹಲವು ಗ್ರಾಹಕರಿಗೆ ಪ್ರಯೋಜನ ಸಿಗಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಒತ್ತಾಯಿಸಿದ ಘಟನೆ ನಡೆದಿದೆ.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಭೆಯು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಲತೀಫ್ ಅಡ್ಕಾರು “ನ್ಯಾಯಬೆಲೆ ಅಂಗಡಿ ಕಾರ್ಯನಿರ್ವಹಿಸುವ ಸಮಯ ಹೇಗೆ? ಎಂದು ಪ್ರಶ್ನಿಸಿದಾಗ, ಸಭೆಯಲ್ಲಿದ್ದ ಆಹಾರ ನಿರೀಕ್ಷಕರು “ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆಯ ವರೆಗೆ ರೇಷನ್ ನೀಡುವ ಸಮಯ. ಇದು ಸರಕಾರದ ಸುತ್ತೋಲೆ. ಆದರೆ ಸಹಕಾರಿ ಸಂಘಗಳಲ್ಲಿ ಅಲ್ಲಿಯ ಕಚೇರಿ ಸಮಯ ಅನ್ವಯಿಸಿಕೊಂಡು ಕಾರ್ಯ ನಿರ್ವಹಿಸುತ್ತಾರೆ. ಅಲ್ಲಿ‌ ಮಧ್ಯಾಹ್ನವೂ ಅಂಗಡಿ ಓಪನ್ ಇರುತ್ತದೆ. ಇದುವರೆಗೆ ಯಾವುದೇ ದೂರು‌ ಬಂದಿಲ್ಲ. ಉತ್ತಮ ರೀತಿಯ ಕೆಲಸಗಳು ಆಗ್ತಾ ಇದೆ. ಶೇ.95 ಪ್ರಗತಿ ಇದೆ ಎಂದು‌ ಮಾಹಿತಿ ನೀಡಿದರು.

“ಸರಕಾರ ಒಂದು ಸಮಯ‌ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ. ಕೂಲಿ ಕಾರ್ಮಿಕರಿಗೆ ಗ್ರಾಮೀಣ ಪ್ರದೇಶದಲ್ಲಿ ಹಗಲು‌ ಕೆಲಸಕ್ಕೆ‌ ಹೋಗುವುದರಿಂದ ರೇಷನ್ ಗೆ ಬರಲು ಆಗಲ್ಲ. ಆದರೂ ಕೆಲವು ಸಂದರ್ಭದಲ್ಲಿ ರಜೆ ಮಾಡಿ ಬರಬೇಕಾದ ಸ್ಥಿತಿ. ಆದ್ದರಿಂದ ವಾರಕ್ಕೊಂದು‌ ದಿನವಾದರೂ ಇಲ್ಲವೇ ತಿಂಗಳಲ್ಲಿ ಎರಡು ದಿನವಾದರೂ ರಾತ್ರಿ 8 ಗಂಟೆವರೆಗೆ ಅಂಗಡಿ ತೆರೆದಿರಲಿ.‌ ಸರಕಾರದ ಸುತ್ತೋಲೆಗೆ ಸ್ವಲ್ಪವಾದರೂ ಬೆಲೆ ಬರಲಿ” ಎಂದು ಲತೀಫ್ ಒತ್ತಾಯಿಸಿದರು. ಆಗ ಮಾತನಾಡಿದ ಈಶ್ವರ ಆಳ್ಚರು “ಸರಕಾರದ ಸುತ್ತೋಲೆ ಇರುವುದು ಹೌದು. ನಾನು ಸಹಕಾರಿ ಸಂಘದಲ್ಲಿ ದುಡಿದವ. ನನಗೆ ಗೊತ್ತಿದೆ ಅಲ್ಲಿ ಆಡಳಿತ ‌ಮಂಡಳಿಯವರ ನಿರ್ದೇಶನದ ಮೇರೆಗೆ ಕೆಲಸ ಆಗುತ್ತಿದೆ. ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಸಿಬ್ಬಂದಿಗಳು‌ ಸೇವೆ ನೀಡುತಿದ್ದಾರೆ” ಎಂದು ಹೇಳಿದರು.

“ಸದಸ್ಯರ ಬೇಡಿಕೆಯ‌ ಕುರಿತು ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳಿಗೆ ನೋಟೀಸ್‌ ಮಾಡಿ ತಿಳಿಸಲಾಗುವುದು” ಎಂದು ಆಹಾರ ನಿರೀಕ್ಷಕರು ಸಭೆಯಲ್ಲಿ ತಿಳಿಸಿದರು.