ಮಾಧ್ಯಮರಂಗ ಕಳೆದುಕೊಂಡ ಅಮೂಲ್ಯ ರತ್ನ ಬಾಳೆಪುಣಿ…

0


ಮಹಾನ್ ಪತ್ರಕರ್ತನ ಜೊತೆ ದುಡಿದಿರುವ, ಅವರೊಂದಿಗೆ ಕಲಿತ ಸಾಕಷ್ಟು ಸಂಗತಿಗಳ ಬಗ್ಗೆ ನನಗೆ ಹೆಮ್ಮೆ ಇದೆ

ಸರಿ ಸುಮಾರು 11 ವರ್ಷಗಳ ಕಾಲ ಒಂದೇ ಕಚೇರಿಯಲ್ಲಿ ನಿತ್ಯ ಕಾರ್ಯನಿರ್ವಹಿಸುತಿದ್ದ , ನನ್ನ ಹಿರಿಯ ಸಹೋದ್ಯೋಗಿ ಗುರುವಪ್ಪ ಬಾಳೇಪುಣಿ ಮೊನ್ನೆ ನಿಧನರಾಗಿದ್ದಾರೆ.


ಕುಕ್ಕೆ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಪದವಿ ಮುಗಿಸಿ, ಉಪನ್ಯಾಸಕರಾದ ಮಂಜುನಾಥ ಭಟ್ ಹಾಗು ಗೋವಿಂದ ಎನ್.ಎಸ್. ಅವರ ಪತ್ರಿಕಾ ತರಬೇತಿ ಪಡೆದ ಬಳಿಕ ನೇರ ಮಂಗಳೂರಿನ ಹೊಸದಿಗಂತ ಪತ್ರಿಕೆಯ ಕೇಂದ್ರ ಕಚೇರಿಯಲ್ಲಿ ಉಪಸಂಪಾದಕನಾಗಿ ಸೇರಿಕೊಂಡೆ. ಹೊಸ ಮುಖಗಳು, ಪರಿಸರ, ಕಚೇರಿ ನಿರೀಕ್ಷೆಗಳೆಲ್ಲವೂ ಹೊಸತು.


ಹಳ್ಳಿಯಿಂದ ನಗರಜೀವನದತ್ತ ಹೆಜ್ಜೆಯದು. ಹೊಸಪಯಣದೊಂದಿಗೆ ಸಂಕೋಚ, ಭಯ, ಸವಾಲುಗಳು.
ಆರೆಸ್ಸೆಸ್ ನಲ್ಲಿ ಒಂದಷ್ಟು ಓಡಾಟ, ಸಂಪರ್ಕ ಹಾಗು ಆರೆಸ್ಸೆಸ್ ಗೆ ಸಂಬಂಧಿತ ಪತ್ರಿಕೆಯಾಗಿದ್ದರಿಂದ ಒಂದಿಷ್ಟು ಸವಾಲುಗಳನ್ನೆದುರಿಸುವ ಧೈರ್ಯ ಜೊತೆಗಿದ್ದಿತು.


ಎರಡನೇ ದಿನ ಬೆಳಗ್ಗೆ ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಶ್ರೀಲಿಪಿ ಕನ್ನಡ ಪದ ಟೈಪ್ ಮಾಡುತ್ತಿದ್ದೆ.ಅತೀ ಕಿರಿಯ ವಯಸ್ಸಿನ ಸಿಬಂದಿ ನಾನೇ. ಹೊಸಬ, ಸಣಕಲು ದೇಹ, ಸಹಜ ಹಳ್ಳಿಯ ಮುಗ್ಧತೆ ಪಕ್ಕನೆ ಕಾಣುತ್ತಿದ್ದರಿಂದ ಕಚೇರಿ ಸಿಬಂದಿಗಳು ನನ್ನನ್ನೆ ಗಮನಿಸುತಿದ್ದರು. ಆಗ ಖಡಕ್ ಇಸ್ತ್ರಿಯ ಬಿಳಿ ಅಂಗಿ, ಹಿರಿ ವಯಸ್ಸಿನ , ಹುಬ್ಬು ಗಂಟಿಕ್ಕಿದ, ಗಂಭೀರ ಮುಖದ ಗಡಸು ಧ್ವನಿ- ಖಡಕ್ ಮಾತಿನೊಂದಿಗೆ ನನ್ನನ್ನೇ ಗಮನಿಸುತ್ತ- ನನ್ನತ್ತ ಮೆಲ್ಲಗೆ ಧಾವಿಸಿದ ಬಾಳ ನ್ನು ಕಂಡು ನನಗೆ ಮನಸ್ಸೊಳಗೆ “ನನ್ನನ್ನೀಗ ರಾಗಿಂಗ್ ಮಾಡಿಬಿಡ್ತಾರೆ” ಅಂತನಿಸಿತು. ಅದಾಗಲೇ ಹತ್ತಿರ ಬಂದು ವಿದ್ಯಾರ್ಥಿ ಮುಂದೆ ಪ್ರಿನ್ಸಿಪಾಲ್ ನಿಂತ ಶೈಲಿಯಲ್ಲೇ ನಿಂತುಬಿಟ್ಟರು. ಹೆಸರೇನು..?, ಯಾವೂರು ? ಸುಳ್ಯದಲ್ಲಿ ಎಲ್ಲಿ ? ಗುತ್ತಿಗಾರಿನಲ್ಲಿ ಎಲ್ಲಿ ? ಅಂತಾ ಒಂದೇ ಸಮನೆ ಪ್ರಶ್ನಿಸಿದ್ರು. ನನ್ನನ್ನೀಗ ಮಾತಿನಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಕಸಿವಿಸಿಗೊಳಿಸ್ತಾರೆ ಅಂತ ಯೋಚಿಸಿ ತಟ್ಟನೆ “ಮತ್ತೆ ಮನೆ ಅಂಗಳಕ್ಕೆ ಹೋಗ್ಬೇಕು..ಆಗ ಮನೆ ಕಾಣ್ತದೆ” ಅಂತ ಖಡಕ್ಕಾಗಿಯೇ ಉತ್ತರಿಸಿ ಕಂಪ್ಯೂಟರ್ ಪರದೆಯತ್ತ ದೃಷ್ಟಿ ಹಾಯಿಸಿ ಸುಮ್ಮನಾದೆ..ಏನೋ ಯೋಚಿಸಿ ಬಂದ ಬಾಳೇಪುಣಿ ಸಣ್ಣಗೆ ಅಂಜಿದಂತೆ ಮುಸಿಮುಸಿ ನಗುತ್ತ ಹೋಗಿ ಅವರ ಸ್ಥಾನದಲ್ಲಿ ಕುಳಿತುಬಿಟ್ಟರು. ಪಕ್ಕದಲ್ಲಿದ್ದ ಮಹಿಳಾ ಸಹೋದ್ಯೋಗಿಗಳು” ಎಲಾ ಇವನಾ”..ಅಂತ ನಗುತ್ತಿದ್ದರು.


ಈ ರೀತಿ ಕಚೇರಿಗೆ ಪ್ರತೀ ವರ್ಷ ಬರುತ್ತಿದ್ದ ಪತ್ರಿಕೋದ್ಯಮ ತರಗತಿಯ ಹಲವಾರು ಇಂಟರ್ನ್ ಶಿಪ್ ನ ವಿದ್ಯಾರ್ಥಿಗಳಿಗೆ ಇಂತದ್ದೇ ಅಸಂಬಧ್ದ ಅನಿಸುವಂತಹ ಪ್ರಶ್ನೆಗಳು ಕೇಳುತ್ತಾ ಪಾಠ ಮಾಡುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೆ. ಕೆಲವೊಮ್ಮೆ ತಮಾಷೆಯೊಂದಿಗೆ ನಕ್ಕುನಗಿಸುತಿದ್ದರು. ಅದು ವಿದ್ಯಾರ್ಥಿಗಳೊಂದಿಗೆ ವಿದ್ಯಾ ರ್ಥಿಗಳಂತೆ..ಮಾತ್ರವಲ್ಲ ಪ್ರೆಸ್ ಮೀಟಲ್ಲೂ ಅದೇ ಶೈಲಿ,
ಒಮ್ಮೊಮ್ಮೆ ಗಂಭೀರತೆ – ಮತ್ತೊಮ್ಮೆ ಸಾದಾಸೀದಾ. ಒಮ್ಮೆ ಒರಟು, ಮಗದೊಮ್ಮೆ ನಯವಿನಯ, ಒಮ್ಮೆ ಆದೇಶ – ಮತ್ತೊಮ್ಮೆ ಸ್ವಯಂ ಪಾಲನೆ. ನಿತ್ಯದ ಬೀಟ್ ವರದಿಯ ಘಟನೆಗಳ ಚಿತ್ರಣದ ಬಗ್ಗೆ ಸಹೋದ್ಯೋಗಿ ಗಳೊಂದಿಗೆ ಹೇಳುತ್ತ ಜೋರಾಗಿ ನಗು, ತಮಾಷೆ, ಹರಟೆ ಮಾಮೂಲಿ ಸಂಗತಿ.
ಚುಟುಕಾದ ಸರಳ- ತೂಕದ ಮಾತು. ರಾಜಕೀಯ ವ್ಯಕ್ತಿಯೇ ಆಗಿರಲಿ, ಡಿ.ಸಿ. ಇರಲಿ , ಎಸ್. ಪಿ. ಆಗಿರಲಿ ಅಥವಾ ಇನ್ಯಾವುದೇ ಮೇಲಧಿಕಾರಿಗಳಿರಲಿ – ಕಚೇರಿಯಲ್ಲಿ ಕೂತು ನಮಸ್ಕಾರ ಸಾಹೇಬ್ರೇ , ಅಥವಾ ನಮಸ್ಕಾರ…ನಾನು ಬಾಳೇಪುಣಿ ಅಂತಾ… ಎಂಬಲ್ಲಿಂದ ಶುರುವಾದರೆ ಅತ್ತ ಕರೆ ಸ್ವೀಕರಿಸಿದ ಅಧಿಕಾರಿ ಕೂಡಾ ಕೊಂಕಿಲ್ಲದೇ ಪೂರ್ಣ ಮಾಹಿತಿ ನೀಡಲೇಬೇಕು. ಯಾಕೆಂದರೆ
ತನ್ನ ನೂತನ‌ ಕಾರ್ಯಕ್ಷೇತ್ರಕ್ಕೆ ಆಗಮಿಸಿದಾಗಲೇ ಜಿಲ್ಲಾ ಕೇಂದ್ರದಲ್ಲಿ ಬಾಳೇಪುಣಿ ಎಂಬ ವ್ಯಕ್ತಿ ಯೋರ್ವರಿದ್ದಾರೆ – ಆ ಪತ್ರಕರ್ತನಿಗೆ ಸಿಕ್ಕಿಬಿದ್ದರೆ ಚಳಿ ಬಿಡಿಸೋದು ಗ್ಯಾರಂಟಿ ಎಂಬಷ್ಟು ಭಯ. ಗೌರವ.


ಅವರು ನನಗಿಂತ ೯ ವರ್ಷ ಹಿರಿಯ ಉದ್ಯೋಗಿ. ಆರೇಳು ವರ್ಷದ ಬಳಿಕ ಕೊಡಗು, ಉಡುಪಿ ಜಿಲ್ಲಾ ಪುಟ ನೋಡಿಕೊಳ್ಳುತಿದ್ದ ಉಪಸಂಪಾದಕನಿಂದ ಹಿರಿಯ ಉಪಸಂಪಾದಕನಾಗಿ ಬಳಿಕ ನಗರ ವರದಿಗಾರನಾದೆ. ಆಗ ಮತ್ತಷ್ಟು ಹತ್ತಿರವಾದರು. ಮುಖ್ಯ ವರದಿಗಾರರು ಸೂಚಿಸಿದ ಕಾರ್ಯಕ್ರಮಗಳಿಗೆ ಬಾಳೇಪುಣಿ, ನಾನು ಹಾಗು ಸುರೇಶ್ ಅಂತಾ ಇನ್ನೋರ್ವರು ಹೋಗುತ್ತಿದ್ದೆವು. ಸದಾ ಇಬ್ಬರು ರಾತ್ರಿ ೯ ಗಂಟೆಯ ವರೆಗೆ ಕ್ರೈಮ್ ಸುದ್ದಿ ಸಹಿತ ಮುಖ್ಯ ಸುದ್ದಿಗಳನ್ನು ನೀಡುವುದು ಕಾರ್ಯಭಾಗ. ತಡವಾದಾಗ ಕೊನೆಯ ಅಪರಾಧ ಸುದ್ದಿಗಾಗಿ ಪೋಲಿಸ್ ಸ್ಟೇಷನ್ ಗಳಿಗೆ ಕರೆ ಮಾಡಿ ಸಂಗ್ರಹಿಸಲು “ಕ್ರೈಮ್ ಒಂಜಿ ತೂವೊನು” ಅಂತ್ಹೇಳಿ ಕೊಣಾಜೆ -ಮುಡಿಪು ಬಸ್ಸೇರಿ ತೆರಳುತ್ತಿದ್ದರು.


ಕೊನೆಗಾಲದಲ್ಲಿ…
ನಾನು ಸ್ವಯಂನಿವೃತ್ತಿಯಾದಾಗ ಕೊನೆಯ ದಿನದಂದು ರಾತ್ರಿ ತಡವಾಗಿದ್ದರೂ ನಿಂತು ಬೀಳ್ಕೊಟ್ಟಿದ್ದರು.
ಇನ್ನು ಪತ್ರಿಕಾವೃತ್ತಿಯಿಂದ ಹೊರಬಂದ ಬಳಿಕವೂ ನನ್ನೊಂದಿಗಿನ ಆತ್ಮೀಯತೆ, ಸ್ನೇಹ, ಒಡನಾಟ, ವರ್ಷಕ್ಕೆ ಎರಡ್ಮೂರು ಬಾರಿ ನನ್ನ ಮನೆ ಭೇಟಿ ಮೂಲಕ ನಿರಂತರವಿತ್ತು. ಇದು ಅವರ ಸ್ನೇಹತ್ವದ ಪ್ರತೀಕ. ಕೆಲವು ಸಂಗತಿಗಳನ್ನು ಚರ್ಚಿಸುತಿದ್ದರು. ರಾಷ್ಟ್ರೀಯ ಹಬ್ಬ, ಧಾರ್ಮಿಕ ಹಬ್ಬಗಳಂದು ಸ್ವಂತ ಟೈಪ್ ಮಾಡಿ ಶುಭಾಶಯ ಕೋರುತ್ತಿದ್ದರು.. ನಾಲ್ಕಾರು ಬಾರಿ ಕರೆ ಮಾಡುತ್ತಿದ್ದರು..” ನಮಸ್ಕಾರ ಅಂತ ಮೊದಲ ಮಾತು ಬಂದಾಗಲೇ ನಾನು ಅಷ್ಟೇ ಖುಷಿಯಿಂದ ಅವರು ಕಚೇರಿಯಲ್ಲಿ ಇನ್ಯಾರಿಗೋ ಕರೆ ಮಾಡಿದಾಗ ಪರಿಚಯಿಸಿಕೊಳ್ಳುವ “ನಾನು ಬಾಳೇಪುಣಿ..ಅಂತಾ” ಅನ್ನುವ ಪದಗಳನ್ನೇ ಅವರಿಗೆ ಹೇಳಿ ನಗುತ್ತಿದ್ದೆ..ಬಳಿಕ ಎರಡನೇ ಮಾತು ನಾನು ಜೀವನಪೂರ್ತಿ ನೆನಪಿಡಲೇಬೇಕಾದ್ದು ..ಅದು ಪ್ರತೀ ಬಾರಿಯೂ ಕರೆ ಮಾಡಿದಾಗ ತಪ್ಪದೇ ಕೇಳುತಿದ್ದ ವಾಕ್ಯ” ಅಮ್ಮ ಹೇಗಿದ್ದಾರೆ..ಧನ್ಯ ಹೇಗಿದ್ದಾರೆ, ಮಗು ಎಲ್ಲ ಕ್ಷೇಮ ತಾನೇ…..? ” ಅಂತಾನೇ.‌..ಮತ್ತೆ ಒಂದಿಷ್ಟು ಕುಶಲೋಪರಿ ಬಳಿಕ ಮಾಹಿತಿ, ಅಭಿಪ್ರಾಯಗಳ ಬಗ್ಗೆ. ಸುಳ್ಯಕ್ಕೆ ಬಂದಿದ್ರಾ ಅಂತಾ ಕೇಳಿದ್ರೆ..” ನಿಂಗೆ ಕರೆ ಮಾಡದೆ ಬರ್ತೀನಾ ನಾನು?” ಅಂತ ಮರುತ್ತರ.


ಅಂದಹಾಗೆ ಉಳ್ಳಾಲ ಕ್ಷೇತ್ರದ ಬಾಳೆಪುಣಿ ಊರಿಗೂ, ಸುಳ್ಯ ಕ್ಷೇತ್ರದ ನನ್ನೂರು ಗುತ್ತಿಗಾರಿಗೂ ನೂರಾರು ಮೈಲಿಗಳ ದೂರ. ಆದರೆ ಸುಳ್ಯಕ್ಕೆ ಸುದ್ದಿಗೋ ಅಥವಾ ಇನ್ನ್ಯಾವುದೋ ಕಾರ್ಯನಿಮಿತ್ತ ಭೇಟಿಗೋ ಬಂದಾಗ ಮನೆಗೆ ಬರುತ್ತಿದ್ದರು. ಹಾಗೆ ಒಮ್ಮೆ ಬಂದಾಗ ಕೇವಲ ತರಕಾರಿ ಸಾಂಬಾರು ಇತ್ತಷ್ಟೆ…ಬರುವ ಸಂಗತಿಯೂ ಗೊತ್ತಿರಲಿಲ್ಲ. ಹೋಟೆಲಿಂದ ಮೀನು ಸಾಂಬಾರು ತರುತ್ತೇನೆಂದು ಹೊರಟಾಗ ಗಟ್ಟಿಯಾಗಿ ಹಿಡಿದು ನಿಲ್ಲಿಸಿ, ಬೇಡ ಎಂದು ಹೇಳಿ ಇದ್ದ ಸಾಂಬಾರಲ್ಲೆ ಊಟ ಮುಗಿಸಿದ್ದರು. “ನಿನಗ್ಗೊತ್ತ..? ನಾನು ಬೂತಾಯಿ ಮೀನು ಹೊರತು ಯಾವ ಮಾಂಸವೂ ತಿನ್ನಲ್ಲ. ಅದು ಕೂಡಾ ಅಪರೂಪ” ಅಂತ ಅಂದಾಗ ಅದುವರೆಗೂ ಅವರೇಕೆ ನಮ್ಮೆದುರು ಮಾಂಸ ತಿನ್ನಲ್ಲ ..ಬಹುಶ ಮೇಲರಿಮೆ .ಅಥವಾ ಶುದ್ಧ ಸಸ್ಯಾಹಾರಿ ಅಂತ ತೋರ್ಪಡಿಕೆ ಎಂಬ ನನ್ನೊಳಗಿನ ಸಂಶಯ ನಿವಾರಣೆಯಾಗಿತ್ತು. ಕೆಲವು ಸಂಗತಿಗಳನ್ನ ಚರ್ಚಿಸುತ್ತಿದ್ದರು. ಇನ್ನು ಕೆಲವು ಸಂಗತಿಗಳಲ್ಲಿ ಮೌನವಾಗಿರುತ್ತಿದ್ದರು. ಗೊತ್ತೊ, ಗೊತ್ತಿಲ್ಲ್ವೋ ಎಂಬ ನಿಗೂಢದಂತೆ.

ಸುದ್ದಿಯ ಶಿವಾನಂದರು, ಸೋನಾ, ದಂಬೆಕೋಡಿ ಬಗ್ಗೆ…
ಒಂದೊಮ್ಮೆ ಸುಳ್ಯಕ್ಕೆ ಪತ್ರಕರ್ತೆಯೋರ್ವಳ ವಿವಾಹಕ್ಕೆಂದು ಆಗಮಿಸಿದ್ದರು. ದಾರೆಯ ಬಳಿಕ ಶುಭಾಶಯ ಕೋರಿ ನನ್ನ ಬೈಕಲ್ಲಿ ” ಇಲ್ಲಗ್ ಪೋಯಿ” ಅಂದಾಗ ಮರುಮಾತಿಲ್ಲದೇ ಬೈಕೇರಿ ಕುಳಿತುಬಿಟ್ಟರು..ಮಧ್ಯಾಹ್ನ ಊಟ ನನ್ನ ಮನೆಯಲ್ಲಿಯೇ. ಹಾಗೆ ಬಂದವರು ವೆಂಕಟ್ ದಂಬೆಕೋಡಿ ಹೇಗಿದ್ದಾರೆ ಅಂತ ವಿಚಾರಿಸಿದ್ರು. ಕರಾವಳಿಯ ಪತ್ರಕರ್ತ ವಲಯದಲ್ಲಿ ಪಂಚಾಯತ್ ರಾಜ್ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಬೆರಳ ತುದಿಯ ಮಾಹಿತಿ ಬಾಳೆಪುಣಿಯವರಲ್ಲಿದ್ದಷ್ಟು ಇನ್ಯಾರಿಗೂ ಇರಲಿಲ್ಲ.
ದಂಬೆಕೋಡಿಯವರನ್ನು ಮನೆಯಲ್ಲಿ ಭೇಟಿಯಾಗಿ ಒಂದಿಷ್ಟು ರಾಜಕೀಯದ ಬಗ್ಗೆ ಚರ್ಚಿಸಿ ತೆರಳಿದಾಗ ದಾರಿ ಮಧ್ಯೆ ” ನಾನು ನನ್ನ ವೃತ್ತಿ ಜೀವನದಲ್ಲಿ ಎರಡೇ ಎರಡು ಒಳ್ಳೆಯ ಜಿ.ಪಂ.ಅಧ್ಯಕ್ಷರನ್ನು ಕಂಡಿದ್ದು . ಒಬ್ಬರು ದಂಬೆಕೋಡಿ. ಮತ್ತೊಬ್ಬರು ಕೊರಗಪ್ಪ” ಅಂದ್ರು. ” ದಂಬೆಕೋಡಿ ಇರುವಾಗ ಏನು ಅಚ್ಚುಕಟ್ಟು, ಶಿಸ್ತು..” ಅಂತಾ ಮಾತು ಮುಗಿಸಿದ್ರು. ಅದೇ ಕಾರಣಕ್ಕೆ ಅವರನ್ನೊಮ್ಮೆ ಭೇಟಿಯಾಗಿದ್ರು.
ಎರಡು ವರ್ಷದ ಹಿಂದೆ ಸೋನಾ ಅವರ ಸಂಸ್ಮರಣೆಗೆ ತನ್ನ ಅಣ್ಣನ ಅಳಿಯ ಕೊಂಬೆಟ್ಟು ಕಾಲೇಜಿನ ಚಿತ್ರಕಲಾ ಶಿಕ್ಷಕ ಮತ್ತು ಒಂದಿಷ್ಟು ಸ್ನೇಹಿತರೊಂದಿಗೆ ಭೇಟಿಯಾಗಿದ್ರು..ನನಗೆ ಕರೆ ಮಾಡಿ ಬಾ ಅಂದ್ರು..ಸೋನಾ ಅವರ ಬಗ್ಗೆ ಬಹಳ ತಿಳುವಳಿಕೆ ಇದ್ದವರು. ಬಹಳ ಹಿಂದಿನಿಂದಲೇ ನನಗೆ ಆತ್ಮೀಯರು ಅಂತಂದರು. ಕಚೇರಿಯಲ್ಲಿ ಜೊತೆಯಿದ್ದಾಗ ಅವರ ಬಗ್ಗೆ ಚರ್ಚಿಸಿರಲಿಲ್ಲ. ಕಾರ್ಯಕ್ರಮದಲ್ಲಿ ನನ್ನೊಂದಿಗೆ ” ಸೋನಾ ಬಹಳ ದೊಡ್ಡ ವ್ಯಕ್ತಿ . ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು. ರಾಜಕೀಯ ವ್ಯಕ್ತಿಗಳ ಹಿಂದೆ ಅವ್ರು ಹೋಗಿಲ್ಲ. ಹೋಗ್ತಿದ್ರೆ ಏನೋ ಆಗಿಬಿಡ್ತಿದ್ರು”
ಅಂತಂದ್ರು.


ಸೋಣಂಗೇರಿಯ ನೂತನ ವೃತ್ತಕ್ಕೆ ಅವರ ನಾಮಕರಣ ಇಡುವ ಬಗ್ಗೆ ಪರ ವಿರೋಧಗಳು ಜೋರಾದಾಗ. ನನಗೊಮ್ಮೆ ಕರೆ ಮಾಡಿ, ಯಾವ ಪಂಚಾಯತ್ ವ್ಯಾಪ್ತಿ ಅಂತ ವಿಚಾರಿಸಿದ್ರು..ಮತ್ತೆ ಅದಕ್ಕೆ ಅವರ ಹೆಸರು ಇಡುವುದೇ ಸೂಕ್ತ ಅಂತ ಅಭಿಪ್ರಾಯ ಹೇಳಿದ್ರು.
ಸುದ್ದಿ ಪತ್ರಿಕೆಯ ಡಾ.ಶಿವಾನಂದರು ಗ್ರೇಟ್ ಮಾರ್ರೆ..ಅವರು ಗ್ರಾಮೀಣ ಭಾಗದಲ್ಲಿ ತಿರುಗಿ ಸುದ್ದಿಯನ್ನು ಕಟ್ಟಿ ಬೆಳೆಸಿದ್ದು ಮೆಚ್ಚಲೇಬೇಕು. ಅಂತಾ ಮುಕ್ತ ಮನಸ್ಸಿಂದ ಹೊಗಳಿದ್ದ ನೆನಪು ಇನ್ನೂ ಮಾಸಿಲ್ಲ..
ಉಪಸಂಪಾದಕನಾಗಿ ರಾತ್ರಿ ಪಾಳಿಯ ವೃತ್ತಿಯೊಂದಿಗೆ ಮರುದಿನ ಬೆಳಗ್ಗೆ ದೂರದ ಮೂಡುಬಿದಿರೆ ನಿತ್ಯ ಬಸ್ಸಲ್ಲಿ ತೆರಳಿ ಕೋಪರೇಟಿವ್ ಡಿಪ್ಲೋಮಾ ಮುಗಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡ ಸಂತಸದೊಂದಿಗೆ ಸಿಹಿತಿಂಡಿ ಕಚೇರಿಗೆ ಹಂಚಿದ್ದೆ. ಸ್ವೀಕರಿಸುತ್ತಲೇ, ಬಿಡುವಿಲ್ಲದ ಉದ್ಯೋಗದ ಜೊತೆಯಲ್ಲಿ ಶಿಕ್ಷಣ ಪೂರೈಸಿದ್ದಕ್ಕೆ ” ಡಿಪ್ಲೋಮಾವನ್ನು ಪೂರ್ತಿ ಮುಗಿಸಿದ್ದಕ್ಕೆ ನಿನಗೆ ಧನ್ಯವಾದಗಳು ” ಅಂದ್ರು. ಕೆಳಹಂತದವರು ಯಾರೇ ಆಗಿರಲಿ ಅಥವಾ ಶಿಕ್ಷಣ, ಸಮಾಜ ವಿವಿಧ ಕ್ಷೇತ್ರಗಳಲ್ಲಿನ ವಿಶೇಷ ಸಾಧನೆ ಮತ್ತು ಸಾಧಕರನ್ನು ಗುರುತಿಸಿ ಬರಹ ಮತ್ತು ಮಾತಿನ ಮೂಲಕ ಪ್ರೋತ್ಸಾಹಿಸುತಿದ್ದರು. ಅದಕ್ಕಾಗಿ ಅವರ ಮನೆಯ ಹೆಸರೇ “ದುಡಿಮೆ” ಅಂತಿಟ್ಟಿರಬಹುದು.


” ಹಿರಿಯರಿಗೆ ಗೌರವ, ಕಿರಿಯರಲ್ಲಿ ಪ್ರೀತಿ. ಇದು ನಾನು ನನ್ನ ಮಗನಿಗೆ ಸದಾ ಹೇಳೋದು ಭರತ್. ಇದು ಪ್ರತಿಯೊಬ್ಬರಿಗೆ ಇರಬೇಕು” ಅಂತ ಅನ್ನುತ್ತಿದ್ದರು. ಬಹುಶ ಸಮಾಜದ ಬಗ್ಗೆ ಚಿಂತನೆಯುಳ್ಳ ಪತ್ರಕರ್ತ ತನ್ನ ಮನೆಯೂ ಕೂಡಾ ಹೇಗಿರಬೇಕು ಅಂತ ಯೋಚಿಸಬಲ್ಲ ಅನ್ನುವುದಕ್ಕೆ ಬಾಳೇಪುಣಿ ನಿಧನರಾಗುವ ಕೆಲವೇ ದಿನಗಳ ಹಿಂದೆ ತನ್ನ ಡೈರಿಯಲ್ಲಿ ಮನೆಮಂದಿಗೆ ತಿಳಿಯದಂತೆ ಕೆಲವು ಪಾಯಿಂಟ್ಸ್ ಗಳನ್ನು ಬರೆದಿಟ್ಟು ತನ್ನ ಸಾವಿನ ಬಳಿಕ ಮನೆಮಂದಿಗೆ ಇದನ್ನು ಕೊಟ್ಟು ಅವರು ಇದೇ ಹಾದಿಯಲ್ಲಿ ಮುನ್ನಡೆಯಬೇಕೆಂದು ಬಯಸಿದ್ದನ್ನು ಮಂಗಳೂರಿನ ಪತ್ರಕರ್ತರೋರ್ವರು ತನ್ನ ಬರಹದಲ್ಲಿ ಉಲ್ಲೇಖಿಸಿದ್ದಾರೆ.
ಹೀಗೆ…ಹೇಳೋದಕ್ಕೆ ಸಾಕಷ್ಟಿದೆ. ವರ್ಷದ ಹಿಂದೆ ಅವರೊಂದಿಗಿನ ಕರೆ ಮಾತುಕತೆ ಕಡಿಮೆಯಾಗಿತ್ತು. ಅವರ ಅನಾರೋಗ್ಯದ ಬಗ್ಗೆ ಇತ್ತೀಚಿನ ವರೆಗೆ ಗೊತ್ತಿರಲಿಲ್ಲ. ನನ್ನಮ್ಮ ಆಸ್ಪತ್ರೆ ಗೆ ದಾಖಲಾಗಿದ್ದಾಗ ಎರಡುಬಾರಿ ಕರೆ ಮಾಡಿದ್ದರು. ಸ್ವೀಕರಿಸಲಾಗಿರಲಿಲ್ಲ. ಮತ್ತೆ ಅವರಿಗೆ ಕರೆಯೂ ಮಾಡಿರಲಿಲ್ಲ. ಕರೆ ಮಾಡಿ ಮಾತನಾಡುವ ಹೊತ್ತಿಗೆ ಅವರು ತೀವ್ರ ಅನಾರೋಗ್ಯ ಕ್ಕೀಡಾಗಿದ್ದರು. ಇಷ್ಟು ಬೇಗ ಮಾಧ್ಯಮರಂಗ ಅವರನ್ನು ಕಳೆದುಕೊಂಡೀತೆಂದು ಭಾವಿಸಿರಲಿಲ್ಲ.
ಮೊನ್ನೆ ವಿಧಾನಸಭಾಧ್ಯಕ್ಷರು ಭೇಟಿ ಮಾಡಿದ ಪೋಟೊ ನೋಡಿ ತಿಳಿದು ಮಾಜಿ ಸಹೋದ್ಯೋಗಿಗಳೊಂದಿಗೆ ವಿಚಾರಿಸಿದ್ದೆ.


ಓರ್ವ ಬಡ ಮೊಗೇರ ಕುಟುಂಬದಿಂದ ಬಂದಂತಹ,
ಸರೋಜಿನಿ ನಾಯ್ಡು , ಮಾದ್ಯಮ ಅಕಾಡೆಮಿ ಯಂತಹ ಶ್ರೇಷ್ಢ ಪ್ರಶಸ್ತಿ ಪಡೆದ, ಅದಕ್ಕೂ ಮಿಗಿಲಾಗಿ ಬಲಪಂಥೀಯ ಪತ್ರಿಕೆ ಅಂತಾನೆ ಬಹುತೇಕ ಗುರುತಿಸುವ “ಹೊಸದಿಗಂತ” ಹಾಗು ಕರಾವಳಿಯ ಕೋಮು ಸೂಕ್ಷ್ಮ ದ ಹಣೆಪಟ್ಟಿಯ ನಡುವೆ ಕಿತ್ತಳೆ ಮಾರಿ ಶಾಲೆ ಕಟ್ಟಿಸುವ ಕನಸು ಕಂಡ “ಹಾಜಬ್ಬ” ರಂತವರಿಗೆ ಪದ್ಮಶ್ರೀ ಪ್ರಶಸ್ತಿ ಮಾತ್ರವಲ್ಲ ಶಾಲಾ ಪಠ್ಯಪುಸ್ತಕ ದಲ್ಲಿ ಆ ಸಾಧಕನ ಪಠ್ಯವಾಗಿರಿಸಲು ಕಾರಣರಾದ ಮಹಾನ್ ಪತ್ರಕರ್ತನ ಜೊತೆ ದುಡಿದಿರುವ, ಅವರೊಂದಿಗೆ ಕಲಿತ ಸಾಕಷ್ಟು ಸಂಗತಿಗಳ ಬಗ್ಗೆ ಹೆಮ್ಮೆ ಇದೆ‌. ಬದುಕಿನ ಜಂಜಾಟದ ನಡುವೆ ಕೊನೆಗೊಮ್ಮೆ ಅವರ ಆರೋಗ್ಯ ಬಗ್ಗೆ ವಿಚಾರಿಸಲಾಗಿಲ್ಲವಲ್ಲಾ ಅಂತ ಖೇದವೂ ಇದೆ.

ಭರತ್ ಕನ್ನಡ್ಕ ಗುತ್ತಿಗಾರು