ಕನಕಮಜಲಿನಲ್ಲಿ ಇಕೊ ಕಾರು ಗುದ್ದಿ ಇಬ್ಬರ ಸಾವಿನ ಪ್ರಕರಣ : ಇಕೊ ಮಾಲಕ ಆರ್.ಕೆ.ಭಟ್ ಮೇಲೆ ಕೇಸು ದಾಖಲು

0

ಕನಕಮಜಲಿನಲ್ಲಿ ಶನಿವಾರ ರಾತ್ರಿ ಇಕೊ ಕಾರು ಗುದ್ದಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಇಕೊ ವಾಹನ ಮಾಲಕ ಸುಳ್ಯ ಬೀರಮಂಗಲದ ಆರ್.ಕೆ.ಭಟ್ ರವರ ಮೇಲೆ ಪೋಲೀಸರು ಕೇಸು ದಾಖಲಿಸಿದ್ದಾರೆ. ಇಕೊ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕನಕಮಜಲಿನ ಆತ್ಮಾರಾಮ ಭಜನಾ ಮಂದಿರದಲ್ಲಿ ನಡೆಯುತ್ತಿದ್ದ ಏಕಾಹ ಭಜನೆಗೆಂದು ಕನಕಮಜಲಿನ ಕೋಡಿ ಎಂಬಲ್ಲಿಯ ತಮ್ಮ ಮನೆಯಿಂದ ರಾತ್ರಿ ಎಂಟು ಗಂಟೆ ಸುಮಾರಿಗೆ ಹೊರಟು ಜನಾರ್ದನ ರೈ ಮತ್ತು ಅವರ ಮಾವ ರಾಮಯ್ಯ ರೈಯವರು ಮುಖ್ಯರಸ್ತೆಗೆ ಬಂದಾಗ ಇಕೋ ಕಾರು ಅವರಿಗೆ ಗುದ್ದಿಕೊಂಡು ಹೋಗಿತ್ತು. ಪರಿಣಾಮವಾಗಿ ತೀವ್ರ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದ ಅವರಿಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ನಿನ್ನೆ ಮುಂಜಾನೆ ಅವರಿಬ್ಬರೂ ಕೊನೆಯುಸಿರೆಳೆದಿದ್ದರು.

ಅವರಿಗೆ ಗುದ್ದಿ ಪರಾರಿಯಾಗಿದ್ದ ವಾಹನ ಯಾವುದೆಂದು ಸರಿಯಾಗಿ ಗೊತ್ತಿರಲಿಲ್ಲ. ಪೋಲೀಸರು ಕನಕಮಜಲಿನಿಂದ ಸುಳ್ಯದ ವರೆಗೆ ಮುಖ್ಯರಸ್ತೆಗೆ ಮುಖ ಮಾಡಿ ಇರುವ ಎಲ್ಲ ಸಿ.ಸಿ. ಕ್ಯಾಮರಾಗಳನ್ನು ಪರಿಶೀಲಿಸಿದಾಗ ಅದು ಇಕೋ ಕಾರೆಂದೂ, ಸುಳ್ಯದ ಬೀರಮಂಗಲಕ್ಕೆ ಹೋಗಿರುವುದಾಗಿಯೂ ಗೊತ್ತಾಗಿತ್ತು.


ಅದರ ಜಾಡು ಹಿಡಿದು ಹೋದ ಸುಳ್ಯ ಪೋಲೀಸರಿಗೆ ಆ ಇಕೋ ಕಾರು ಬೀರಮಂಗಲ ನಿವಾಸಿ ಆರ್.ಕೆ.ಭಟ್ ರವರದೆಂದು ತಿಳಿದುಬಂದಿತಲ್ಲದೆ, ಆ ವಾಹನ ಆರ್.ಕೆ.ಯವರ ಮನೆಯಂಗಳದಲ್ಲಿರುವುದು ಕಂಡುಬಂತು. ಪರಿಶೀಲಿಸಿದಾಗ ಅದರ ಎದುರು ಭಾಗ ಜಖಂಗೊಂಡಿರುವುದು ಕೂಡ ಕಂಡುಬಂತು. ಅಪಘಾತ ನಡೆಸಿದ ಸಂದರ್ಭ ಆರ್.ಕೆ.ಯವರೇ ಕಾರು ಚಲಾಯಿಸುತ್ತಿದ್ದರೇ ಅಥವಾ ಅವರ ಮಗ ಚಲಾಯಿಸುತ್ತಿದ್ದರೇ ಎಂಬುದನ್ನು ಪೋಲೀಸರು ಇನ್ನೂ ದೃಢಪಡಿಸಿಲ್ಲ. ಈಗ ಕಾರಿನ ಮಾಲಕರು ಎಂಬ ನೆಲೆಯಲ್ಲಿ ಆರ್.ಕೆ.ಭಟ್ ರವರ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕಾರು ವಶ


ಕಾರು ಜಖಂಗೊಂಡಿದ್ದು, ಮಂಗಳೂರಿನಿಂದ ವಿಧಿವಿಜ್ಞಾನದವರು, ಬೆರಳಚ್ಚು ತಜ್ಞರು ಇಂದು ಬಂದು ಮಹಜರು ನಡೆಸಿದರು. ಬಳಿಕ ಇಕೊ ವಾಹನವನ್ನು ಪೋಲೀಸರು ಸೀಜ್ ಮಾಡಿ ಠಾಣೆಗೆ ತಂದಿರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಯಾರನ್ನೂ ಇದುವರೆಗೆ ಬಂಧಿಸಿಲ್ಲವೆಂದು ತಿಳಿದುಬಂದಿದೆ. ” ಅಪಘಾತ ಪ್ರಕರಣವಾದುದರಿಂದ ಯಾರನ್ನೂ ಬಂಧಿಸಿಲ್ಲ. ವಾಹನ ಮಾಲಕರ ಮೇಲೆ ಕೇಸು ಮಾಡಿದ್ದೇವೆ. ಇನ್ನು ಕಾನೂನು ರೀತ್ಯಾ ಪ್ರಕರಣ ಮುಂದುವರಿಯುತ್ತದೆ ” ಎಂದು ಪೋಲೀಸರು ತಿಳಿಸಿದ್ದಾರೆ.