ನಾನು ಕಂಡ ಬಲಿಷ್ಟ,ಪರಿಪೂರ್ಣ ಮಹಿಳೆ ನನ್ನಮ್ಮ ಸರೋಜಿನಿ

0

ಸಜ್ಜಿಗೆ ಸೋಜಿಯಲ್ಲಿ ಸಂತೈಸಿ ಸಲಹಿದ ಸರೋಜಿನಿ ಅಮ್ಮ

ಸುಮಾರು ೧೯ ವರ್ಷಗಳ ಹಿಂದೆ ನನ್ನ ಅಮ್ಮ ಮೆದುಳಿನ ಕ್ಯಾನ್ಸರ್‌ನಿಂದ ತೀರಿ ಹೋದರೂ ನನಗೆ ನನ್ನಮ್ಮ ಇಲ್ಲವೆಂದು ಅನಿಸುವುದೇ ಇಲ್ಲ. ಯಾಕೆಂದರೆ ನನ್ನಮ್ಮ ನನ್ನ ದೇಹದ ಇಂಚಿಂಚಿನಲ್ಲೂ ಆವರಿಸಿಕೊಂಡು ನನ್ನನ್ನು ಸದಾ ಎಚ್ಚರಿಸುತ್ತಲೇ ಇದ್ದಾಳೆ. ಭೌತಿಕವಾಗಿ ಇಲ್ಲದಿದ್ದರೂ ನಾನು ಮಾಡುವ ಪ್ರತೀ ಕೆಲಸ ಕಾರ್ಯದಲ್ಲೂ ಆಕೆಯೇ ಆವರಿಸಿಕೊಂಡಿದ್ದಾಳೆ. ಎಂಬತ್ತರ ದಶಕದಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ನನ್ನನ್ನು ಸಾಕಿ ಸಲಹಿ ಮುದ್ದಾಡಿದ ನನ್ನಮ್ಮ ಸರೋಜಿನಿ ಇಡೀ ಜೀವಮಾನಕ್ಕೆ ಸಾಕಾಗುವಷ್ಟು ಪ್ರೀತಿ ಹಂಚಿ ನನ್ನನ್ನು ಧನ್ಯಳಾಗಿಸಿದ್ದಳು. ಬಡತನದ ಕಾಲದಲ್ಲಿ ಮೂರು ಹೊತ್ತಿನ ಗಂಜಿಗೂ ತತ್ವಾರ ಇರುವ ದಿನಗಳಲ್ಲಿ ತಾನು ಖಾಲಿ ಹೊಟ್ಟೆಯಲ್ಲಿ ಮಲಗಿ ನಮ್ಮ ಹೊಟ್ಟೆಗೆ ಕಡಿಮೆಯಾಗದಂತೆ ನೋಡಿಕೊಂಡಿದ್ದಳು. ಎಲ್ಲಾ ಮಕ್ಕಳಂತೆ ಬೆನ್ನು ಬೆನ್ನಿಗೆ ಹುಟ್ಟಿದ ನಾವು ನಾಲ್ವರು ಮಕ್ಕಳು. ಅಮ್ಮ ಏನಾದರೂ ತಿನ್ನಲು ಕೊಡು ಎಂದು ಅಮ್ಮನನ್ನು ಗೊಗರೆದಾಗ ಅಮ್ಮ ನಮಗೆ ಎಂದೂ ನಿರಾಶೆಗೊಳಿಸಿದ್ದು ಇಲ್ಲ. ಕತ್ತಲು ತುಂಬಿದ ಮನೆಯ ಅಡುಗೆ ಕೋಣೆಯ ಹೊಗೆಯ ನಡುವೆ ಮಸಿ ಹಿಡಿದ ಡಬ್ಬಿಗಳಲ್ಲಿ ಅಕ್ಕಿ ಅವಲಕ್ಕಿ ದಿನಸಿ ಖಾಲಿಯಾದರೂ ಅಪ್ಪನ ಬಳಿ ಎಂದೂ ಗೊಣಗಲಿಲ್ಲ. ಪಾತ್ರೆಯ ತಳದಲ್ಲಿ ಮರ‍್ಯಾದೆ ಉಳಿಸಲು, ಮಕ್ಕಳ ಹೊಟ್ಟೆ ತುಂಬಿಸಲು ಇರಲಿ ಎಂದು ಕಾಪಿಟ್ಟುಕೊಂಡ ಹುರಿದ ಸಜ್ಜಿಗೆಯನ್ನು ಬಳಸಿ, ಬೆಲ್ಲ ನೀರು ಸೇರಿಸಿ ಕುದಿಸಿ, ಗ್ಲಾಸ್‌ ತುಂಬಾ ಬಿಸಿ ಬಿಸಿ ಸಜ್ಜಿಗೆ ಸೋಜಿ ಮಾಡಿ ನಮ್ಮ ಹೊಟ್ಟೆ ತುಂಬಿಸಿ ಸಂತೃಪ್ತಿಯ ನಗು ಬೀರುತ್ತಿದ್ದಳು ಆ ಮಹಾತಾಯಿ. ಮನೆಯ ಕಷ್ಟದ ಕಾಲದಲ್ಲಿ ಎಷ್ಟೋ ಬಾರಿ ರಾತ್ರಿ ಊಟ ಮಾಡದೆ ಮಲಗಿ, ಮಕ್ಕಳ ಹೊಟ್ಟೆ ತುಂಬಿಸಿ ಸಂತೃಪ್ತಿಯ ನಗು ಬೀರುತ್ತಿದ್ದಳು.

ತನಗರಿವಿಲ್ಲದೆ ಕಣ್ಣಂಚಿನಿಂದ ಜಾರಿದ ಕಣ್ಣೀರನ್ನು ತನ್ನ ಮಕ್ಕಳಿಗೆ ಕಾಣದಂತೆ ಒರೆಸಿ ನಗುತ್ತಿದ್ದಳು ನನ್ನಮ್ಮ. ಇಂದು ನಾವು ಪಂಚತಾರ ಹೋಟೆಲಿನಲ್ಲಿ ಒಂದು ಸಾವಿರ ರೂಪಾಯಿ ಕೊಟ್ಟು ಫ್ರುಟ್ ಪಂಚ್ ಕುಡಿದಾಗ ನಮಗೆ ಯಾವುದೇ ಭಾವನೆಗಳೇ ಬರುತ್ತಿಲ್ಲ ಜಡುಗಟ್ಟಿದ ನಾಲಗೆಗೆ. ರುಚಿಯಂತೂ ಇಲ್ಲವೇ ಇಲ್ಲ. ಆದರೆ ಅಮ್ಮನ ಅಮೃತ ಹಸ್ತದಿಂದ ಮಾಡಿಸಿ ಕುಡಿದ ಸಜ್ಜಿಗೆ ಸೋಜಿಯ ಕಂಪು ಮತ್ತು ರುಚಿ ಇಂದಿಗೂ ತನ್ನ ಮನದಲ್ಲಿ ಅಚ್ಚಳಿಯದೇ ನಿಂತಿದೆ. ಎಲ್ಲ ಮಕ್ಕಳಂತೆ ನಾವೂ ಬಾಲ್ಯದಲ್ಲಿ ತುಂಟಾಟ ಮಾಡಿ ಕೋಪಿಷ್ಠ ಅಪ್ಪನಿಂದ ಪೆಟ್ಟು ತಪ್ಪಿಸಿಕೊಳ್ಳಲು ನಮಗೆ ಅತೀ ಹೆಚ್ಚು ಭದ್ರತೆ ನೀಡಿದ್ದು ಅಮ್ಮನ ಸೆರಗು. ಎಷ್ಟೋ ಬಾರಿ ಶಾಲೆಯಿಂದ ಮನೆಗೆ ಮಳೆಯಲ್ಲಿ ನೆನೆದು ಬಂದಾಗ ಅಮ್ಮ ಎದೆಗಪ್ಪಿಕೊಂಡು ಒದ್ದೆ ತಲೆಯನ್ನು ತನ್ನ ಬೆಚ್ಚಗಿನ ಸೆರಗಿನಲ್ಲಿ ಒರೆಸಿ ಮಾಯ ಮಾಡುತ್ತಿದ್ದಳು. ಅಕ್ಕನಿಗೋ ತಮ್ಮನಿಗೋ ನೆಗಡಿಯಾದಾಗ ಅದೇ ಸೆರಗಿನಲ್ಲಿ ಒರೆಸಿ ಸರಾಗವಾಗಿ ಉಸಿರಾಟಕ್ಕೆ ಹಾದಿ ಮಾಡಿ ಕೊಟ್ಟದ್ದೂ ಅದೇ ಅಮ್ಮನ ಅದೇ ಸೆರಗು. ಕೊತ ಕೊತ ಕುದಿಯುವ ಅನ್ನದ ದೊಡ್ಡ ಹಂಡೆಯನ್ನು ಒಲೆಯಿಂದ ಗಂಜಿ ಬಸಿದು ಎದೆ ಬಾರವಾದಾಗ ಹಣೆಯಲ್ಲಿ ಸಾಲುಗಟ್ಟಿದ ಬೆವರನ್ನು ಅದೇ ಸೆರಗಿನಲ್ಲಿ ಒರೆಸಿ ನಿಟ್ಟುಸಿರು ಬಿಡುತ್ತಿದ್ದಳು ನನ್ನಮ್ಮ ಸಂತೃಪ್ತಿಯ ಭಾವದೊಂದಿಗೆ ಹಸಿದು ಶಾಲೆಯಿಂದ ಬಂದ ಮಕ್ಕಳಿಗೆ ಬಿಸಿ ಬಿಸಿ ಹಬೆಯಾಡುವ ಗಂಜಿಯನ್ನು ಚಟ್ನಿಯೊಂದಿಗೆ ನೀಡಿ ಮಕ್ಕಳ ಹೊಟ್ಟೆ ತುಂಬಿಸಿ ತಾನು ಸಂತಸ ಪಡುತ್ತಿದ್ದಳು ನನ್ನಮ್ಮ. ಕೊನೆಗೆ ಅಳಿದುಳಿದ ಗಂಜಿ ತಿಂದು, ಸೇರುಗಟ್ಟಲೆ ನೀರು ಕುಡಿದು ಹೊಟ್ಟೆ ತುಂಬಿದಂತೆ ನಾಟಕವಾಡುತ್ತಿದ್ದಳು ನನ್ನಮ್ಮ, ಮಕ್ಕಳಿಗೆ ಗೊತ್ತಾಗದಿರಲಿ ಎಂದು ಹುಸಿನಗುವಿನೊಂದಿಗೆ ನಮ್ಮನ್ನು ರಮಿಸುತ್ತಿದ್ದಳು.

ಇಂದು ನಮಗೆ ಸಕಲ ಸಂಪತ್ತು ಸೌಕರ್ಯ ಸೌಭಾಗ್ಯ ಎಲ್ಲವೂ ಇದೆ. ಆದರೆ ಅಮ್ಮನಿಲ್ಲ ಎಂಬ ಕೊರಗೂ ಇದೆ. ಎಲ್ಲವೂ ಇದ್ದರೂ ಏನೂ ಇಲ್ಲ ಎಂಬ ಹತಾಶೆ ಮತ್ತು ನಿರ್ಲಿಪ್ತತೆ ಇದೆ. ಇದೇ ನಮ್ಮ ಬದುಕಿನ ವಾಸ್ತವ ಎಂಬ ಸತ್ಯದ ಅರಿವು ನಮಗಾಗಿದೆ. ನಮ್ಮೆಲ್ಲಾ ಕನಸುಗಳನ್ನು ಕನಸಿನ ಮಟ್ಟದಲ್ಲಿಯೇ ಉಳಿಯಗೊಡುವುದೇ ಬದುಕಿನ ವಿಪರ‍್ಯಾಸ ಎಂಬ ಕಟು ಸತ್ಯದ ನೆನಪು ಪ್ರತಿ ದಿನ ಆಗುತ್ತಿದೆ. ಇಂದಿನ ಅಮ್ಮನಿಲ್ಲದ ದಿನಗಳಲ್ಲಿ ಅಮ್ಮನ ನೆನಪಾದಾಗಲೆಲ್ಲಾ ಅದೇ ಅಮ್ಮನ ಹಳೆಯ ಹರಿದ ಸೀರೆಯನ್ನು ಮತ್ತಷ್ಟು ಹರಿದು ತಲೆದಿಂಬಿನ ಕವರನ್ನಾಗಿಸಿ ನಿದ್ದೆ ಬಾರದೇ ಹಾಸಿಗೆಯಲ್ಲಿ ಹೊರಳಾಡುತ್ತಿರುವಾಗ ಅದೇ ದಿಂಬನ್ನು ಎದೆಗವುಚಿಕೊಂಡು ಅಮ್ಮನ ಸೆರಗಿನ ವಾಸನೆಯನ್ನು ಮತ್ತಷ್ಟು ಆಘ್ರಾಣಿ ಸುತ್ತಾ ಅಮ್ಮನ ಇರುವಿಕೆಯನ್ನು ಅನುಭವಿಸುತ್ತಲೇ ಇರುತ್ತೇನೆ. ನಮ್ಮ ಪಾಲಿಗೆ ಬಂದಿದ್ದು ಇಷ್ಟೇ ಎಂದು ನಿಟ್ಟುಸಿರು ಬಿಡುತ್ತಾ ನನಗರಿವಿಲ್ಲದೆ ಅಪರ ರಾತ್ರಿಯಲ್ಲಿ ನಿದ್ದೆಗೆ ಜಾರುತ್ತೇನೆ ಮತ್ತು ಎಚ್ಚರವಾದಾಗ ಸೂರ್ಯ ಪಡುವಣ ದಿಕ್ಕಿನಲ್ಲಿ ನಗುತ್ತಿರುತ್ತಾನೆ. ಬದುಕಿನ ಬಂಡಿ ಸಾಗುತ್ತಲೇ ಇದೆ. ಅಮ್ಮನನಿಲ್ಲದೆ ಸರ್ವವೂ ಶೂನ್ಯ ಎಂಬ ಬಾವದೊಂದಿಗೆ ಬದುಕು ಸಾಗುತ್ತಿದೆ.

ಅಮ್ಮ ಎಂದರೆ ತ್ಯಾಗ, ಅಮ್ಮ ಎಂದರೆ ಭರವಸೆ, ಅಮ್ಮ ಎಂದರೆ ಜವಾಬ್ದಾರಿ, ಅಮ್ಮ ಎಂದರೆ ಕರುಣಾಮಯಿ, ಅಮ್ಮ ಎಂದರೆ ಭದ್ರತೆ, ಅಮ್ಮ ಎಂದರೆ ದೇವತಾ ಸ್ವರೂಪಿ. ಅಮ್ಮನೇ ಸರ್ವಸ್ವ. ಅದೇ ಕಾರಣಕ್ಕೆ ಬಲ್ಲವರು ಹೇಳುತ್ತಾರೆ ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ. ಅದಕ್ಕೆ ಅಮ್ಮನನ್ನು ಸ್ರಷ್ಟಿಸಿದ್ದಾರೆ ಎಂದು.. ಇದೇ ಕಾರಣದಿಂದಲಾದರೂ ಬದುಕಿರುವಾಗಲೇ ಅಮ್ಮನನ್ನು ದೇವತೆಯಂತೆ ಕಂಡು ಪೂಜಿಸೋಣ, ಪ್ರೀತಿಸೋಣ ಮತ್ತು ಧನ್ಯತೆಯನ್ನು ಪಡೆಯೋಣ…. ಅಡುಗೆ ಮನೆಯಿಂದಲೇ ಬದುಕಿನ ಪಾಠ ಹೇಳಿ ಕೊಡುತ್ತಿರುವ ಮತ್ತು ಹೇಳಿಕೊಟ್ಟ ಎಲ್ಲಾ ಅಮ್ಮಂದಿರಿಗೂ ಈ ವಿಶ್ವ ಮಹಿಳಾ ದಿನದಂದು ಶತ ಕೋಟಿ ನಮನಗಳು ಮತ್ತು ಸಾಷ್ಟಾಂಗ ಪ್ರಣಾಮಗಳು.

ಡಾ|| ಮುರಲೀ ಮೋಹನ್‌ ಚೂಂತಾರು