ಜಗತ್ತಿನಲ್ಲಿ ಅತೀ ಹೆಚ್ಚು ದುರ್ಬಳಕೆಯಾಗುವ ಔಷಧಿಗಳಲ್ಲಿ ಮೊದಲ ಸ್ಥಾನ ಇದ್ದರೆ ಅದು ಅನಾಯಾಸವಾಗಿ ನಮ್ಮ ನೋವು ನಿವಾರಕ ಔಷಧಿಗೆ ಸಿಗಬೇಕು. ಯಾಕೆಂದರೆ ಮನುಷ್ಯ ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ನೋವುಗಳಿಗೆ ಕುಂಟು ನೆಪ ಹೇಳಿ ನೋವು ನಿವಾರಕ ಔಷಧಿ ತೆಗೆದುಕೊಳ್ಳುವ ಚಾಳಿ ಬೆಳೆಸಿಕೊಂಡಿದ್ದಾನೆ. ನಿತ್ಯ ಜೀವನದಲ್ಲಿ ಮನುಷ್ಯನಿಗೆ ದೈಹಿಕವಾದ ನೋವು ಸಹಜವೇ. ಮಾನಸಿಕವಾದ ನೋವು ಸ್ನೇಹಿತರೊಡನೆ, ಸಂಬಂಧಿಕರೊಡನೆ ದುಃಖ ಹಂಚಿದಾಗ ಕಡಮೆಯಾಗುತ್ತದೆ. ಆದರೆ ದೈಹಿಕ ನೋವು ನಿವಾರಣೆಗೆ, ನೋವು ನಿವಾರಕಗಳಿಗೆ ಮನುಷ್ಯ ಅತಿಯಾಗಿ ಅವಲಂಬಿತವಾಗಿರುವುದಂತೂ ನಿಜವಾದ ಮಾತು.
ಸೊಂಟ ನೋವು, ತಲೆ ನೋವು, ಕಾಲು ನೋವು, ಕಿವಿ ನೋವು, ಗಂಟಲು ನೋವು ಹೀಗೆ ನೋವಿನ ಪಟ್ಟಿ ಬೆಳೆಯುತ್ತಲೇ ಇದೆ. ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ನೋವುಗಳು ನೋವು ನಿವಾರಕ ಔಷಧಿಗಳಿಗೆ ಸ್ಪಂದಿಸುತ್ತದೆ. ಇಂತದ್ದೇ ನೋವಿಗೆ ಇಂತದ್ದೇ ಮಾತ್ರೆ ಎಂಬ ಲಿಖಿತ ನಿಯಮವಿಲ್ಲ. ನೋವು ಯಾವುದೇ ಮೌಲದ್ದು ಆಗಿರಲಿ, ಯಾವುದೇ ಕಾರಣದಿಂದ ಆಗಿರಲಿ, ನೋವು ನಿವಾರಕ ಔಷಧಿಗಳಿಗೆ ಬಗ್ಗುತ್ತದೆ ಎಂದು ಸಣ್ಣ ಮಕ್ಕಳಿಗೂ ತಿಳಿದಿದೆ. ಈ ಕಾರಣದಿಂದಲೇ ಈ ಔಷಧಿಯ ಬಳಕೆ ದಿನೇ ದಿನೇ ಜಾಸ್ತಿಯಾಗುತ್ತದೆ. ಮತ್ತೆ ಈ ನೋವು ನಿವಾರಕ ಔಷಧಿಗಳು ವೈದ್ಯರ ಚೀಟಿ ಇಲ್ಲದೆ ಎಲ್ಲಾ ಮೆಡಿಕಲ್ ಶಾಪ್‍ಗಳಲ್ಲಿ ಅನಾಯಾಸವಾಗಿ ಎಲ್ಲಾ ವಯಸ್ಸ್ಸಿನ ಎಲ್ಲಾ ವರ್ಗದ ಜನರಿಗೆ ಸಿಗುವ ಕಾರಣದಿಂದಾಗಿ ಇದರ ದುರ್ಬಳಕೆ ಕೂಡ ಮುಗಿಲು ಮುಟ್ಟಿದೆ.
ನೋವು ನಿವಾರಕ ಔಷಧಿಗಳ ಆಯ್ಕೆ ಹೇಗೆ?
ವೈದ್ಯರು ಒಬ್ಬ ವ್ಯಕ್ತಿಗೆ ನೋವು ನಿವಾರಕ ಔಷಧಿ ನೀಡುವಾಗ ಹಲವಾರು ವಿಚಾರಗಳನ್ನು ಚಿಂತಿಸಿ, ಮಂಥಿಸಿ, ವ್ಯಕ್ತಿಯ ದೇಹಸ್ಥಿತಿ, ಮನೋಸ್ಥಿತಿ, ದೇಹದ ತೂಕ, ಲಿಂಗ, ಇತರ ಅನಾರೋಗ್ಯಗಳ ಉಪಸ್ಥಿತಿ, ವ್ಯಕ್ತಿಯ ಆರ್ಥಿಕ ಸ್ಥಿತಿ, ದೇಹದ ಇತರ ಅಂಶಗಳನ್ನು ಪರಿಗಣಿಸಿ ನೋವು ನಿವಾರಕ ಔಷಧಿಯನ್ನು ಆಯ್ಕೆ ಮಾಡುತ್ತಾರೆ.
- ಒಬ್ಬ ರೋಗಿಗೆ ನೋವು ನಿವಾರಕ ಔಷಧಿ ನೀಡುವಾಗ ರೋಗಿಯ ದೇಹದ ತೂಕವನ್ನು ಪರಿಗಣಿಸಿ ಆ ವ್ಯಕ್ತಿಗೆ ಎಷ್ಟು ನೋವು ನಿವಾರಕ ಅವಶ್ಯಕತೆ ಎಂಬದನ್ನು ನಿರ್ಧರಿಸಲಾಗುತ್ತದೆ. ಉದಾಹರಣೆ 80 ಕಿಲೋಗ್ರಾಂ ಇರುವ ವ್ಯಕ್ತಿಗೆ ಕೊಟ್ಟ ಔಷಧಿಯನ್ನು 40 ಕಿಲೋಗ್ರಾಂ ಇರುವ ವ್ಯಕ್ತಿಗೆ ನೀಡಲಾಗುದು. ಪಾರಾಸಿಟಮಾಲ್ ಔಷಧಿಯನ್ನು ಪ್ರತಿ ಕಿಲೋಗ್ರಾಂ 25mg ನಂತೆ ನೀಡುತ್ತಾರೆ. 80 ಕಿಲೋಗ್ರಾಂ ತೂಕಜ ವ್ಯಕ್ತಿಗೆ ದಿನವೊಂದಕ್ಕೆ 80×25 2000mg ನೀಡಬೇಕು. ಆದರೆ 40ಕಿಲೋಗ್ರಾಂ ತೂಕದ ವ್ಯಕ್ತಿಗೆ ದಿನವೊಂದಕ್ಕೆ 40×25 1000mg ನೀಡಿದರೆ ಸಾಕಾಗುತ್ತದೆ. ಈ ಕಾರಣದಿಂದ ವೈದ್ಯರು ನಿಮಗೆ ನೀಡಿದ ಔಷಧಿಯನ್ನು ಇತರರಿಗೆ ನೀಡಬಾರದು.
- ವ್ಯಕ್ತಿಯ ಮನೋಸ್ಥಿತಿ, ಆತ ಭೌತಿಕವಾದ ನೋವಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ನಿರ್ಧರಿಸಿ ಯಾವ ರೀತಿಯ ನೋವು ನಿವಾರಕ ನೀಡಬೇಕು ಎಂದು ವೈದ್ಯರು ನಿರ್ಧರಿಸುತ್ತಾರೆ. ಕೆಲವೊಮ್ಮೆ ಗಟ್ಟಿ ಮನಸ್ಸಿನ ದೃಡ ನಿಶ್ಚಯದ ವ್ಯಕ್ತಿಗೆ ಮೃದುವಾದ ನೋವು ನಿವಾರಕ ನೀಡಲಾಗುತ್ತದೆ. ಆದರೆ ಸಣ್ಣ ಪುಟ್ಟ ನೋವಿಗೂ ಅಂಜುವ ವ್ಯಕ್ತಿಗಳಿಗೆ, ಸ್ವಲ್ಪಹೆಚ್ಚಿನ ಶಕ್ತಿಯುತ ನೋವು ನಿವಾರಕ ಔಷಧಿ ನೀಡಲಾಗುತ್ತದೆ. ನೋವು ನಿವಾರಕದ ಆಯ್ಕೆ ವ್ಯಕ್ತಿಯ ಮನೋಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.
- ಒಂದು ವೇಳೆ ರೋಗಿ ಅಸಿಡಿಟಿ ಅಥವಾ ರಕ್ತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಲ್ಲಿ ಆತನಿಗೆ ಆಸ್ಪರಿನ್ ಮುಂತಾದ ನೋವು ನಿವಾರಕ ಔಷಧಿ ನೀಡುವುದಿಲ್ಲ.
- ಒಂದು ವೇಳೆ ರೋಗಿ ಲಿವರ್‍ನ ಸಿರ್ಹೊಸಿಸ್ ತೊಂದರೆ ಅಥವಾ ಕಿಡ್ನಿ ತೊಂದರೆ ಇದ್ದಲ್ಲಿ, ಅತಿ ತುರ್ತು ಅವಶ್ಯಕತೆ ಇದ್ದಲ್ಲಿ ಮಾತ್ರ ನೋವು ನಿವಾರಕ ಔಷಧಿ ನೀಡಲಾಗುತ್ತದೆ.
- ರೋಗಿ ಅಸ್ತಮಾ ರೋಗದಿಂದ ಬಳಲುತ್ತಿದ್ದಲ್ಲಿ ಆತನಿಗೆ ಬ್ರೂಫೇನ್ ಮತ್ತು ಡೈಕ್ಲೋಫೇನಕ್ ನೋವು ನಿವಾರಕ ನೀಡಿದರೆ ಅಸ್ತಮಾ ಉಲ್ಬಣವಾಗುತ್ತದೆ. ಆಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಡೆಕ್ಸೊಫೆನಕ್ ಸೋಡಿಯಂ ಔಷಧಿ ನೀಡಬಾರದು.
- ಮಕ್ಕಳಲ್ಲಿ ಲಿವರ್ ಬೆಳವಣಿಗೆಯಾಗದ ಕಾರಣ ಭ್ರೂಫೆನ್ ಮತ್ತು ನಿಮೆಸುಲೈಡ್ ಔಷಧಿ ಬಳಸಬಾರದು. ಅಂತಿಮ ಹಂತದ ಲಿವರ್ ತೊಂದರೆ ಇರುವವರಲ್ಲಿಯೇ ಈ ಔಷಧಿ ಬಳಸಬಾರದು.
- ಗರ್ಭಿಣಿಯರಲ್ಲಿ ಯಾವುದೇ ನೋವು ನಿವಾರಕ ಔಷಧಿ ಅನಗತ್ಯವಾಗಿ ಬಲಸಲೇಬಾರದು. ಅತೀ ಅಗತ್ಯವಿದ್ದರೆ ಪಾರಾಸಿಟಮೋಲ್ ಔಷಧಿ ಬಳಸಬಹುದು. ಅದೂ ವೈದ್ಯರ ಸಲಹೆ ಮತ್ತು ಸೂಚನೆ ಮೇರೆಗೆ.
- ಸಣ್ಣ ಪುಟ್ಟ ನೋವುಗಳಿಗೆ ಅತ್ಯಂತ ಲಘವಾದ ನೋವು ನಿವಾರಕ ನೀಡಲಾಗುತ್ತದೆ. ಸರ್ಜರಿ ಮಾಡಿ ರೋಗಿಗಳಿಗೆ ತೀವ್ರತರವಾದ ನೋವಿರುವ ಸಾಧ್ಯತೆ ಇದ್ದಲ್ಲಿ ತೀಕ್ಷವಾದ ನೋವು ನಿವಾರಕಗಳಾದ ಟ್ರಮಡಾಲ್ ಮುಂತಾದ ನೋವು ನಿವಾರಕ ಔಷಧಿ ನೀಡಲಾಗುತ್ತದೆ. ಗ್ಯಾಸ್ಟಿಕ್ ಸಮಸ್ಯೆ ಇರುವವರಲ್ಲಿ, ಅಸಿಡಿಟಿ ತೊಂದರೆ ಇರುವವರು ಯಾವುದೇ ನೋವು ನಿವಾರಕ ಔಷಧಿ ವೈದ್ಯರ ಸಲಹೆ ಇಲ್ಲದೆ ಬಳಸಬಾರದು. ಅಗತ್ಯವಿದ್ದಲ್ಲಿ ಅಸಿಡಿಟಿಗೆ ಔಷಧಿ ನೀಡಿ ಅದರ ಜೊತೆಗೆ ನೋವು ನಿವಾರಕ ಔಷಧಿ ನೀಡಲಾಗುತ್ತದೆ.
ಕೊನೆ ಮಾತು
ನೋವು ನಿವಾರಕ ಔಷಧಿಗಳನ್ನು ಬಹಳ ಜಾಗ್ರತೆಯಿಂದ ಅತೀ ಅಗತ್ಯವಿದ್ದಾಗ ಮಾತ್ರ ಸೇವಿಸಬೇಕು. ಪಾಪ್‍ಕಾರ್ನ ಅಥವಾ ಚಾಕಲೇಟು ತಿಂದಂತೆ ತಿನ್ನುವುದು ಅತ್ಯಂತ ಅಪಾಯಾಕಾರಿ. ಅತಿಯಾಗಿ ಬಲಸಿದಲ್ಲಿ ಲಿವರ್ ತೊಂದರೆ, ಕಿಡ್ನಿ ತೊಂದರೆಗಳು, ಅಲರ್ಜಿ ಗ್ಯಾಸ್ಟ್ರಿಕ್ ತೊಂದರೆ ಉಂಟಾಗಬಹುದು. ಮತ್ತು ನೋವು ನಿವಾರಕ ಔಷಧಿಗಳಿಗೆ ಅಡಿಕ್ಟ್ ಆಗುವ ಎಲ್ಲಾ ಸಾಧ್ಯತೆಗಳೂ ಇರುತ್ತದೆ. ಯಾವುದೇ ನೋವು ನಿವಾರಕ ಔಷಧಿ ಸೇವಿಸುವ ಮೊದಲು ಮಾತ್ರೆಯ ಹೊರಭಾಗದಲ್ಲಿರುವ ಸೂಚನೆಗಳನ್ನು ಓದಬೇಕು. ವೈದ್ಯರ ಸೂಚನೆಯಂತೆ ಬಳಸಿ. ಬೇಗನೆ ನೋವು ಕಡಮೆಯಾಗಲಿ ಎಂದು ಒಮ್ಮೆಲೇ ಮೂರ್ನಾಲ್ಕು ಮಾತ್ರೆ ತಿನ್ನುವುದು ಮೂರ್ಖತನದ ಪರಮಾವಧಿ. ಹಾಗೆ ಮಾಡಿದಲ್ಲಿ ಅಡ್ಡ ಪರಿಣಾಮ ಜಾಸ್ತಿಯಾಗುತ್ತದೆ. ಕೆಲವೊಮ್ಮೆ ಕೆಲವೊಂದು ನೋವು ನಿವಾರಕ ಔಷಧಿಗಳು ಬೇರೆ ಔಷಧಿಗಳ ಜೊತೆಗೆ ಸೇರಿಕೊಂಡು ವಿಪರೀತ ತೊಂದರೆ ನೀಡಬಹುದು, ನೋವು ಬೇಗ ಉಪಶಮನವಾಗಲಿ ಎಂದು ಎರಡು ಬಗೆಯ ನೋವು ನಿವಾರಕಗಳನ್ನು ಒಮ್ಮೆಲೇ ಸೇವಿಸುವುದು ಕೂಡಾ ಅತೀ ಅಪಾಯಕಾರಿ. ಅದೇ ರೀತಿ ಓಪಿಯಾಯ್ಡ ಗುಂಪಿಗೆ ಸೇರಿದ ನೋವು ನಿವಾರಕ ಸೇವನೆಯಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುತ್ತದೆ. ನೀವು ಯಾವುದಾದರೂ ಇತರ ಔಷಧಿ ಸೇವಿಸುತ್ತಿದ್ದಲ್ಲಿ, ವೈದ್ಯರ ಬಳಿ ಮುಕ್ತವಾಗಿ ಹೇಳಿಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ಹೆಚ್ಚಿನ ನೋವು ನಿವಾರಕ ಔಷಧಿ ತೆಗೆದುಕೊಳ್ಳಬಾರದು. ಹಾಗೆ ಮಾಡಿದಲ್ಲಿ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ. ಕೆಲವೊಂದು ನೋವು ನಿವಾರಕ ತೆಗೆದುಕೊಂಡಾಗ ದೇಹಕ್ಕÉ ತೂಕಡಿಕೆ ಬರುವ ಸಾಧ್ಯತೆ ಇರುತ್ತದೆ. ಅ ಸಂದರ್ಭಗಳಲ್ಲಿ ವಾಹನ ಚಾಲನೆ ಮಾಡಬಾರದು. ಮಧ್ಯಪಾನ ಮಾಡಿದ ಬಳಿಕ ಕೆಲವೊಂದು ನೋವು ನಿವಾರಕಗಳು ವ್ಯತಿರಕ್ತ ಪರಿಣಾಮ ಬೀರಬಹುದು. ಒಟ್ಟಿನಲ್ಲಿ ನೋವು ನಿವಾರಕ ಔಷಧಿಯನ್ನು ಅತಿ ಅಗತ್ಯವಿದ್ದಾಗ ಔಷಧಿಯಂತೆ ಸೇವಿಸಿದಲ್ಲಿ ಮಾತ್ರ ನಿಮ್ಮ ಆರೋಗ್ಯ ನಿಮ್ಮ ಹತೋಟಿಯಲ್ಲಿ ಇರುತ್ತದೆ ಎಂಬುದನ್ನು ಯಾವತ್ತೂ ರೋಗಿಗಳು ಅರಿತುಕೊಳ್ಳಬೇಕು. ಅದರಲ್ಲಿಯೇ ನಿಮ್ಮ ಹಿತ ಅಡಗಿದೆ.
–ಡಾ|| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
Consultant Oral And Maxillofacial Surgeon
[email protected]
9845135787
www.surakshadental.com