ಹತ್ಯೆಗೊಳಗಾದ 6 ಕುಟುಂಬಕ್ಕೆ ಪರಿಹಾರದೊಂದಿಗೆ ಉದ್ಯೋಗದ ಭರವಸೆ

0

ಕಾಂಗ್ರೆಸ್ ಸರಕಾರಿಂದ ಸಾಮಾಜಿಕ ನ್ಯಾಯ : ಟಿ.ಎಂ.ಶಹೀದ್ ತೆಕ್ಕಿಲ್ ಶ್ಲಾಘನೆ

ಕೋಮು ದಳ್ಳುರಿಗೆ ಸಿಲುಕಿ ಹತ್ಯೆಗೊಳಗಾದ ೬ ಮಂದಿಯ ಕುಟುಂಬಗಳಿಗೆ ರಾಜ್ಯ ಸರಕಾರ ಪರಿಹಾರ ನೀಡುವುದರೊಂದಿಗೆ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವ ಭರವಸೆ ನೀಡಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಸಾಮಾಜಿಕ ನ್ಯಾಯದಡಿಯಲ್ಲಿ ಕೆಲಸ ಮಾಡುತ್ತಿದ್ದು ಕೇಂದ್ರ ಸರಕಾರ ಕೂಡಾ ಅದೇ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಕರ್ನಾಟಕ ಮುಸ್ಲಿಂ ಪರಿಷತ್‌ನ ಪ್ರಧಾನ ಕಾರ್ಯದಶಿ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಜೂ.೨೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೋಮು – ಸಂಘರ್ಷಕ್ಕೆ ಹತ್ಯೆಗೊಳಗಾದ ೬ ಮಂದಿಯ ಕುಟುಂಬಕ್ಕೆ ೨೫ ಲಕ್ಷ ರೂ ಪರಿಹಾರದೊಂದಿಗೆ ಉದ್ಯೋಗದ ಭರವಸೆ ನೀಡಲಾಗಿದೆ. ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗದಲ್ಲಿ ಮುಂದುವರಿಯಲೂ ಅವಕಾಶ ಕಲ್ಪಿಸಲಾಗಿದೆ. ಈಗ ತಾತ್ಕಲಿಕ ಕೆಲಸ ಮಾಡುವ ಅವರಿಗೆ ಪರ್ಮನೆಂಟ್ ಆಗುವಂತೆ ಪ್ರಯತ್ನ ಪಡಲಾಗುವುದು ಎಂದು ಹೇಳಿದರು. ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಹತ್ಯೆಗೊಳಗಾದವರಿಗೆ ಪರಿಹಾರ ನೀಡು ಅಂದೇ ಮನವಿ ಮಾಡಲಾಗಿತ್ತಾದರೂ ಬಿಜೆಪಿ ಸರಕಾರ ಸಹಕಾರ ನೀಡದಿರುವುದು ಬೇಸರದ ವಿಚಾರ. ಆಗಿದ್ದ ಮಂತ್ರಿಗಳೂ ಮೃತರ ಮನೆಗೆ ಭೇಟಿ ಕೊಟ್ಟಿಲ್ಲ, ಅಧಿಕಾರಿಗಳೂ ಬಾರದಂತೆ ತಡೆದಿದ್ದರು. ಹತ್ಯೆಗೊಳಗಾದವರ ಕುಟುಂಬದ ನೋವನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ವಿಶ್ವಾಸ ವಿದೆ. ಮುಂದೆ ಈ ರೀತಿಯ ಘಟನೆ ನಡೆಯಬಾರದು. ನಡೆದರೆ ಆರೋಪಿಗೆ ಕಠಿಣ ಶಿಕ್ಷೆ ಆಗಬೆಕು ಎಂದು ಹೇಳಿದರು. ಅಲ್ಪಸಂಖ್ಯಾತರಿಗೆ ಇಲಾಖೆಯಿಂದ ಸಿಗುವ ಸವಲತ್ತಿಗೆ ಬಿಜೆಪಿ ಕತ್ತರಿ ಹಾಕಿತ್ತು. ಈ ಸರಕಾರ ಮತ್ತೆ ನೀಡಲಿದೆ. ಈ ಹಿಂದೆ ಮನವಿ ಮಾಡಿದ್ದಂತೆ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ರೂ.ಮುರೂವರೆ ಸಾವಿರ ಕೋಟಿ ಅನುದಾನ ಬಜೆಟ್‌ನಲ್ಲಿ ಇಡುವ ವಿಶ್ವಾಸ ಇರುವುದಾಗಿ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಮೂಸಾಕುಂಞಿ ಪೈಂಬೆಚ್ಚಾಲು, ಸಿದ್ದೀಕ್ ಕೊಕ್ಕೋ, ಆರ್.ಬಿ.ಬಶೀರ್ ಪೈಚಾರ್, ಶರೀಫ್ ಕಂಠಿ ಇದ್ದರು.