ಅರಸು ಜನ್ಮದಿನಾಚರಣೆ ಆಮಂತ್ರಣ ಪತ್ರ ಮರುಮುದ್ರಣ
ನಾಳೆ ನಡೆಯುವ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಪ್ರೊಟೊಕಾಲ್ ಪಾಲಿಸಿಲ್ಲವೆಂದು ದೂರು ಬಂದ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬದಲಾಯಿಸಿ ಮುದ್ರಿಸಿದ ಘಟನೆ ವರದಿಯಾಗಿದೆ.
ಆ.20 ರಂದು ನಡೆಯುವ ದಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದೆ. ಅದರ ಆಮಂತ್ರಣ ಪತ್ರಿಕೆ ಕೂಡ ಮುದ್ರಣವಾಗಿತ್ತು. ಆದರೆ ಆ ಆಮಂತ್ರಣದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರ ಹೆಸರು, ಸದಸ್ಯರೊಬ್ಬರ ಹೆಸರು ಹಾಕಿ ಅದೇ ಕ್ಷೇತ್ರದ ಸದಸ್ಯರಾಗಿದ್ದು, ಈಗ ಪಂಚಾಯತ್ ಉಪಾಧ್ಯಕ್ಷರಾಗಿರುವವರ ಹೆಸರು ಹಾಕದ ಬಗ್ಗೆ ಉಬರಡ್ಕ ಗ್ರಾಮದ ಮುಖಂಡರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರೊಟೊಕಾಲ್ ಪಾಲಿಸದಿರುವ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡುವುದಾಗಿ ಹೇಳಿದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇಲಾಖೆಯ ತಾಲೂಕು ಅಧಿಕಾರಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರೊಟೊಕಾಲ್ ಪ್ರಕಾರ ಬೇರೆ ಆಮಂತ್ರಣ ಪತ್ರಿಕೆ ಮುದ್ರಿಸಿದರೆಂದು ತಿಳಿದುಬಂದಿದೆ.
ಈ ಬಗ್ಗೆ ತಾಲೂಕು ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಶ್ರೀಮತಿ ಗೀತಾರವರನ್ನು ಸಂಪರ್ಕಿಸಿ ವಿಚಾರಿಸಿದಾಗ, ” ನಾನು ಹೊಸದಾಗಿ ತಾಲೂಕು ಮಟ್ಟದ ಅಧಿಕಾರಿಯಾದವಳು. ಪ್ರೊಟೊಕಾಲ್ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಈಗ ತಿಳಿದ ಬಳಿಕ ತಿದ್ದಿಕೊಂಡು ಸರಿಪಡಿಸಿ ಬೇರೆ ಆಮಂತ್ರಣ ಮುದ್ರಿಸಿದ್ದೇವೆ ” ಎಂದು ಹೇಳಿದರು.