ಹಕ್ಕು ಖುಲಾಸೆಗೆ ಹಣದ ಬೇಡಿಕೆ

0

ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅರಂತೋಡು ಗ್ರಾಮ ಆಡಳಿತಾಧಿಕಾರಿ


ಇಲ್ಲಿದೆ ಫುಲ್ ಡಿಟೇಲ್ಸ್

ಹಕ್ಕು ಖುಲಾಸೆಗಾಗಿ ಹಣದ ಬೇಡಿಕೆ ಇಟ್ಟ ಅರಂತೋಡು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ ಲಂಚ ಸ್ವೀಕರಿಸುತ್ತಿದಾಗಲೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ.


ಅರಂತೋಡು ಗ್ರಾಮದ ಅಡ್ತಲೆ ದಿ. ಕೂಸಪ್ಪ ಗೌಡರು ನಿಧನರಾಗಿದ್ದು, ಅವರ ಮಗ ಹರಿಪ್ರಸಾದ್‌ರು ತಮ್ಮ ತಂದೆಯವರ ಹೆಸರಿನಲ್ಲಿದ್ದ ಅರಂತೋಡು ಗ್ರಾಮದ ಸರ್ವೆ ನಂಬ್ರ 98/೨ರಲ್ಲಿ 1.35 ಎಕ್ರೆ ಜಮೀನು, ತಂದೆಯವರ ನಿಧನದ ನಂತರ ಹರಿಪ್ರಸಾದ್, ಅವರ ತಾಯಿ, ಹಾಗೂ ಸಹೋದರಿಯ ಹೆಸರಿನಲ್ಲಿ ಜಂಟಿ ಖಾತೆ ಆಗಿತ್ತು. ಈ ಜಂಟಿ ಖಾತೆಯನ್ನು ಹರಿಪ್ರಸಾದರ ಹೆಸರಿಗೆ ಖಾತೆ ಮಾಡಿಸಲು ಕಳೆದ ಮಾರ್ಚ್ 5ರಂದು ಸುಳ್ಯ ಉಪನೋಂದಾವಣಾಧಿಕಾರಿಯವರ ಕಚೇರಿಯಿಂದ ಕಂದಾಯ ಇಲಾಖೆಯ ಭೂಮಿ ಕೇಂದ್ರಕ್ಕೆ ಪಹಣಿಯಲ್ಲಿ ಕಂಡು ಬರುವ ಸರಕಾರಿ ನಿಬಂಧನೆಗಳನ್ನು ವಜಾಗೊಳಿಸಲು ಹರಿಪ್ರಸಾದರು ಅರಂತೋಡು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾರಲ್ಲಿಗೆ ಹೋಗಿ ವಿಚಾರಿಸಿದ್ದರೆನ್ನಲಾಗಿದೆ. ಆದರೆ ಆ ಕಡತ ಬಂದಿಲ್ಲವೆಂದು ಗ್ರಾಮ ಆಡಳಿತಾಧಿಕಾರಿ ಹೇಳಿದ್ದರು.


ಬಳಿಕ ಹರಿಪ್ರಸಾದರು ಜು.೨೪ರಂದು ಸುಳ್ಯ ತಾಲೂಕು ಕಚೇರಿಗೆ ಹೋದಾಗ ಅಲ್ಲಿದ್ದ ಮಿಯಾಸಾಬ್ ಮುಲ್ಲಾರಲ್ಲಿ ವಿಚಾರಿಸಿದರೆಂದೂ ನಿಮ್ಮ ಕಡತ ಬಂದಿದೆ ಎಂದು ಅವರು ಹೇಳಿರೆನ್ನಲಾಗಿದೆ. ಈ ವೇಳೆ ಹರಿಪ್ರಸಾದರು ಎನ್.ಒ.ಸಿ. ಯಾವಾಗ ಸಿಗಬಹುದೆಂದು ಕೇಳಿದಾಗ, ಮಿಯಾ ಸಾಬ್ ಮುಲ್ಲಾ ಸ್ವಲ್ಪ ಖರ್ಚಿದೆ, ಖರ್ಚು ಮಾಡುವುದಾದರೆ ನಾನು ಮಾಡಿಕೊಡುತ್ತೇನೆ ಎಂದು ತಿಳಿಸಿದರೆಂದೂ, ಹರಿಪ್ರಸಾದ್‌ರು ಎಷ್ಟು ಖರ್ಚು ಆಗಬಹುದು ಎಂದು ಕೇಳಿದಾಗ, ಸುಮಾರು 8 ರಿಂದ 9ಸಾವಿರ ಆಗಬಹುದೆಂದು ಹೇಳಿದರಲ್ಲದೆ, ನೀವೆ ಹೋದರೆ ಇದಕ್ಕಿಂತ ಹೆಚ್ಚು ಖರ್ಚಾಗಬಹುದು. ಎನ್‌ಒಸಿ ಸಿಗುವಾಗ ಒಂದು ವರ್ಷ ಆದರೂ ಆಗಬಹುದು ಎಂದು ಹೇಳಿದರೆಂದೂ, ಹರಿಪ್ರಸಾದ್‌ರಿಗೆ ಬ್ಯಾಂಕ್ ಲೋನ್ ಅರ್ಜೆಂಟ್ ಇದ್ದುದರಿಂದ ಎನ್‌ಓಸಿ ಅಗತ್ಯವಾಗಿ ಸಿಗಬೇಕಾದುದರಿಂದ ನೀವೆ ಮಾಡಿ ಕೊಡಿ ಎಂದು ಹೇಳಿದರೆನ್ನಲಾಗಿದೆ. ಆ ವೇಳೆ ಗ್ರಾಮ ಆಡಳಿತಾಧಿಕಾರಿಗಳು ನಿಮ್ಮಲ್ಲಿ ಇದ್ದಷ್ಟು ಕೊಡಿ, ಉಳಿದ ಹಣವನ್ನು ಒಮ್ಮೆಗೆ ನಾನು ಕೊಡುತ್ತೇನೆ. ಮತ್ತೆ ನೀವು ನನಗೆ ಕೊಡಿ ಎಂದು ಹೇಳಿದರೆಂದೂ, ಆ ವೇಳೆ ಹರಿಪ್ರಸಾದರು ತಮ್ಮಲ್ಲಿದ್ದ 3೦೦೦ ಸಾವಿರ ರೂ ನೀಡಿದರೆನ್ನಲಾಗಿದೆ.
ಹರಿಪ್ರಸಾದರು ಆ.೧೭ರಂದು ಅರಂತೋಡಿಗೆ ವಿಎ ಕಚೇರಿಗೆ ಹೋಗಿ ಎನ್.ಓ.ಸಿ. ವಿಚಾರವಾಗಿ ಮಾತನಾಡಿದಾಗ ಮಿಯಾಸಾಬ್ ಮುಲ್ಲಾರವರು ರೂ.5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟರಲ್ಲದೆ, ಆ.19 ರಂದು ಶನಿವಾರ ನಾನು ತಾಲೂಕು ಕಚೇರಿಯಲ್ಲಿ ಇರುತ್ತೇನೆ ಅಲ್ಲಿಗೆ ಬಂದು ಹಣ ನೀಡಿ ಎಂದು ಹೇಳಿದ್ದರೆನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಹರಿಪ್ರಸಾದರು ಅದೇ ದಿನ ಲೋಕಾಯುಕ್ತ ಪೋಲೀಸರಿಗೆ ಕರೆ ಮಾಡಿ ದೂರಿಕೊಂಡರೆನ್ನಲಾಗಿದೆ. ಆ.೧೮ರಂದು ಮಂಗಳೂರಿನ ಊರ್ವದಲ್ಲಿರುವ ಲೋಕಾಯುಕ್ತ ಕಚೇರಿಗೆ ಹರಿಪ್ರಸಾದರು ಹೋಗಿ ಲಿಖಿತ ದೂರು ಹಾಗೂ ಗ್ರಾಮ ಕರಣಿಕರೊಂದಿಗೆ ಮಾತನಾಡಿದ್ದ ಆಡಿಯೋ ಸಂದೇಶ ನೀಡಿ ಬಂದರೆಂದೂ ತಿಳಿದು ಬಂದಿದೆ.


ಇಂದು ಬೆಳಗ್ಗೆ ಹರಿಪ್ರಸಾದರು ವಿ.ಎ. ಮಿಯಾಸಾಬ್ ಮುಲ್ಲಾರಿಗೆ ಕರೆ ಮಾಡಿದಾಗ ನೀವು ಕಂದಾಯ ನಿರೀಕ್ಷಕರ ಕಚೇರಿಗೆ ಬನ್ನಿ ನಾನು ಅಲ್ಲಿzನೆ ಎಂದು ಹೇಳಿದದರೆಂದೂ ಹರಿಪ್ರಸಾದರು ಅಲ್ಲಿಗೆ ಹೋಗಿ ಹಣಕ್ಕೊಟ್ಟು ಹೊರಗೆ ಬರುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಅವರ ತಂಡ ಬಂದು ಮಿಯಾಸಾಬ್ ರನ್ನು ವಶಕ್ಕೆ ಪಡೆದರೆಂದು ತಿಳಿದು ಬಂದಿದೆ. ಬಳಿಕ ಅಲ್ಲೇ ಮಹಜರು ನಡೆಸಲಾಯಿತು.


ಲೋಕಾಯುಕ್ತ ಪೋಲೀಸ್ ಅಧಿಕ್ಷಕ ಸಿ.ಎ. ಸೈಮನ್, ಪೋಲೀಸ್ ಉಪಾಧೀಕ್ಷಕರುಗಳಾದ ಶ್ರೀಮತಿ ಕಲಾವತಿ ಕೆ, ಚೆಲುವರಾಜು ಬಿ, ಪೋಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ, ಸಿಬ್ಬಂದಿಗಳಾದ ಮಹೇಶ್, ವಿನಾಯಕ, ವೈಶಾಲಿ, ರಾಜಪ್ಪ ಟ್ರ್ಯಾಪ್ ಕಾರ್ಯಾಚರಣೆಯಲ್ಲಿದ್ದರು.