ಚೆನ್ನಕೇಶವ ದೇವಸ್ಥಾನ ಮತ್ತು ಬೂಡು ಭಗವತಿ ಕ್ಷೇತ್ರದ ವತಿಯಿಂದ ಪಯಸ್ವಿನಿ ನದಿಯ ದೇವರ ಮೀನುಗಳಿಗೆ ನೈವೇದ್ಯ ಸಮರ್ಪಣೆ

0

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಹಾಗೂ ಪನ್ನೆಬೀಡು ಬೂಡು ಶ್ರೀ ಭಗವತಿ ಕ್ಷೇತ್ರದ ವತಿಯಿಂದ ವರ್ಷಂಪ್ರತಿ ಶ್ರಾವಣ ಮಾಸದ ಸಂದರ್ಭದಲ್ಲಿ ಪಯಸ್ವಿನಿ ನದಿ ತಟದಲ್ಲಿ ಅರ್ಚಕರ ನೇತೃತ್ವದಲ್ಲಿ ಪೂಜೆಯನ್ನು ನೆರವೇರಿಸಿಬಳಿಕನದಿಯಲ್ಲಿರುವ ದೇವರ ಮೀನುಗಳಿಗೆ ನೈವೇದ್ಯ ಸಮರ್ಪಣೆ ಮಾಡುವ ಕಾರ್ಯವನ್ನುಸಂಪ್ರದಾಯದಂತೆ ಇಂದು (ಸೆ.14) ನೆರವೇರಿಸಲಾಯಿತು.

ಪೂರ್ವಜರ ಕಾಲದಿಂದಲೂ ನಡೆದು ಕೊಂಡು ಬರುತ್ತಿರುವ ಪದ್ಧತಿ ಇದಾಗಿದ್ದು ಈ ಕಾರ್ಯವನ್ನು ಬೂಡು ಭಗವತಿ ಕ್ಷೇತ್ರದ ಆರಾಧಕರು ನಡೆಸಿಕೊಂಡು ಬರುವುದು ರೂಢಿಯಲ್ಲಿದೆ. ಇಂದಿನಿಂದ ಚೆನ್ನಕೇಶವ ದೇವರ ಜಾತ್ರೋತ್ಸವ ಮುಗಿದು ಧ್ವಜಾವರೋಹಣದ ದಿನದವರೆಗೆ ನಿತ್ಯವು ಬೆಳಗ್ಗೆ ಮೀನುಗಳಿಗೆ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ.
ಬೂಡು ಶ್ರೀ ಭಗವತಿ ಕ್ಷೇತ್ರದ ಎದುರಿನ ದೇವರ ಗದ್ದೆಯಲ್ಲಿ ಬೇಸಾಯ ಮಾಡಿದ ಭತ್ತವನ್ನು ಹಣ್ಣು ಹಂಪಲಿನೊಂದಿಗೆ ಮೀನುಗಳಿಗೆ ಸಮರ್ಪಿಸುವುದು ಸಂಪ್ರದಾಯವಾಗಿದೆ.
ಈ ಮಾಸದಲ್ಲಿ ಸೀಮೆ ದೇವಸ್ಥಾನ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಮೀನುಗಳು ಇಲ್ಲಿಗೆ ಬಂದು ಸಮರ್ಪಿಸಿದ ನೈವೇದ್ಯ ಸ್ವೀಕರಿಸುತ್ತವೆ ಎಂಬುದು ನಂಬಿಕೆಯಾಗಿದೆ.
ಬೆಳಗ್ಗೆ ನಾಗಪಟ್ಟಣ ಸೇತುವೆ ಬಳಿ ಪಯಸ್ವಿನಿ ನದಿ ತಟದಲ್ಲಿ ಅರ್ಚಕ ಹರಿಪ್ರಸಾದ್ ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನನೆರವೇರಿಸಲಾಯಿತು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪೈಕಿ ಕೃಪಾಶಂಕರ ತುದಿಯಡ್ಕ ರವರು ಪ್ರಾರ್ಥಿಸಿ ಬೂಡು ಶ್ರೀ ಭಗವತಿ ಕ್ಷೇತ್ರದ ಕರ್ತೃ ಬೂಡು ರಾಧಾಕೃಷ್ಣ ರೈ ಯವರು ಮೀನುಗಳಿಗೆ ಬಾಗಿನ ಸಮರ್ಪಿಸಿದರು. ಈ ಸಂದರ್ಭದಲ್ಲಿ ಎನ್.ಎ.ರಾಮಚಂದ್ರ,
ಭಾಸ್ಕರ ರೈ ಉಬರಡ್ಕ ಮಿತ್ತೂರು,
ಸುನಿಲ್ ಕೇರ್ಪಳ, ಜನಾರ್ದನ ನಾಯ್ಕ್ ಕೇರ್ಪಳ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಮೋನಪ್ಪ ಪೂಜಾರಿ, ಕುಸುಮಾಧರ ರೈ ಬೂಡು, ರವಿಚಂದ್ರ ಕೇರ್ಪಳ, ಗುಡ್ಡಪ್ಪ ಕೇರ್ಪಳ, ಪ್ರದೀಪ್ ರೈ ,ಕೃಷ್ಣ ಮೇಸ್ತ್ರಿ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.
ನೈವೇದ್ಯ ಸಮರ್ಪಣೆಯಾಗಿ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.