ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳಿಗೆ ಜನರು ಮಾರುಹೋಗದೇ, ಜನರ ಹಸಿವಿಗೆ ನೆರವಾದ ಕಾಂಗ್ರೆಸ್ ಸರಕಾರದ ಪರ ಒಲವು ತೋರುತ್ತಿದ್ದಾರೆ. ನುಡಿದಂತೆ ನಡೆಯದ ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಎ.೧೩ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ ಕಳೆದ ಎರಡು ಅವಧಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸಿದೆ. ಅಧಿಕಾರಕ್ಕೆ ಬರುವ ಸಂದರ್ಭ ಅವರು ಜನರಿಗೆ ನೀಡಿದ ಆಶ್ವಾಸನೆಯನ್ನು ಇನ್ನೂ ಈಡೇರಿಸಿಲ್ಲ. ಇದರಿಂದ ಜನರು ರೋಸಿ ಹೋಗಿದ್ದು ನುಡಿದಂತೆ ನಡೆದಿರುವ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ. ಬಿಜೆಪಿಯವರು ಆಶ್ವಾಸನೆ ನೀಡಿದಂತೆ ಸ್ವಿರh ಬ್ಯಾಂಕ್‌ನಿಂದ ೧೫ ಲಕ್ಷ ಹಣ ನಮ್ಮ ಖಾತೆಗೆ ಬಂದಿಲ್ಲ. ಜನ್ ಧನ್ ಖಾತೆಗೆ ಕೇಂದ್ರ ಸರಕಾರದಿಂದ ಹಣ ನೀಡುತ್ತೇವೆ ಎಂದು ಹೇಳಿದ್ದೂ ಆಗಿಲ್ಲ. ಚಿನ್ನದ ದರ ಕಡಿಮೆಯಾಗಿಲ್ಲ. ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಕಡಿಮೆಯಾಗಿಲ್ಲ. ವಿದ್ಯಾವಂತರಿಗೆ ಉದ್ಯೋಗ ಸೃಷ್ಠಿಸಿಲ್ಲ. ನೋಟ್ ಬ್ಯಾನ್, ಜಿಎಸ್‌ಟಿಯಿಂದ ತೊಂದರೆ ಎದುರಿಸುತ್ತಿದ್ದಾರೆ. ಅಲ್ಲದೆ ಅಗತ್ಯ ವಸ್ತುಗಳ ಬೆಲೆ, ಔಷಧಿಗಳ ಬೆಲೆ ಎಲ್ಲವೂ ದಿನದಿಂದ ದಿನಕ್ಕೆ ಏರುತ್ತಿದೆ ಎಂದವರು ಹೇಳಿದರು.
ಬಿಜೆಪಿಯವರು ಅಧಿಕಾರಕ್ಕೆ ಬರುವ ಸಂದರ್ಭ ರೈತರ ಆದಾಯ ದುಪ್ಪಟ್ಟಾಗಿಸುವುದಾಗಿ ಹೇಳಿದ್ದರು. ಆದರೆ ಈಗ ರಾಸಾಯನಿಕ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ ಎಂದು ಬೆಲೆ ಏರಿಕೆ ಆಗಿರುವ ವಸ್ತುಗಳ ವಿವರ ನೀಡಿದ್ದರಲ್ಲದೆ, ಬೆಲೆ ಏರಿಕೆಯ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಅದೇ ರೀತಿ ಈ ಬಾರಿಯೂ ಕಾಂಗ್ರೆಸ್ ೫ ನ್ಯಾಯಪತ್ರವನ್ನು ಬಿಡುಗಡೆಗೊಳಿಸಿದೆ. ೫ ನ್ಯಾಯ ಪತ್ರದಲ್ಲಿಯೂ ಒಂದೊಂದರಲ್ಲಿ ೫ ಗ್ಯಾರಂಟಿಗಳು ಹೀಗೆ ೨೫ ಗ್ಯಾರಂಟಿಗಳು ಇವೆ ಎಂದ ಅವರು ಯುವ ನ್ಯಾಯದ ಮೂಲಕ ಉದ್ಯೋಗ ಸೃಷ್ಠಿ, ರೈತ ನ್ಯಾಯದ ಮೂಲಕ ಬೆಂಬಲ ಬೆಲೆ, ನಾರಿ ನ್ಯಾಯದ ಮೂಲಕ ಬಡ ಕುಟುಂಬದ ಮಹಿಳೆಗೆ ರೂ. ೧ಲಕ್ಷ ವರ್ಷಕ್ಕೆ, ಶ್ರಮಿಕ ನ್ಯಾಯದ ಮೂಲಕ ಕೂಲಿ ಕಾರ್ಮಿಕರಿಗೆ ಸೌಲಭ್ಯ ಹೀಗೆ ಜನರಿಗೆ ಉಪಯುಕ್ತವಾದ ಯೋಜನೆಯನ್ನು ನೀಡಲಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯನ್ನು ತಂದಾಗ ಬಿಜೆಪಿಯವರು ಗ್ಯಾರಂಟಿ ಕಾರ್ಡನ್ನು ವಿರೋಧಿಸಿದ್ದರು. ಬಳಿಕ ಅವರೇ ಮೊದಲಾಗಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ನಮ್ಮ ವಿರೋಧ ಇಲ್ಲ. ಸರಕಾರದ ಯೋಜನೆ ಎಲ್ಲರೂ ಪಡೆಯಲಿ ಎಂದ ಅವರು ಚುನಾವಣೆಯ ಈ ಸಂದರ್ಭ ಫೀಲ್ಡ್ ಹೋಗುವಾಗ ಜನರು ಕಾಂಗ್ರೆಸ್ ಸರಕಾರದ ಯೋಜನೆಯ ಉತ್ತಮ ಕುರಿತು ಹೇಳುತಿದ್ದು, ಈ ಬಾರಿ ನಮ್ಮ ಅಭ್ಯರ್ಥಿ ಪರ ಮತ ಚಲಾಯಿಸಿ ಋಣ ಸಂದಾಯ ಮಾಡಲು ಅವಕಾಶ ಎಂದವರು ಹೇಳಿದರು.
ನೋಟಾ ಅಭಿಯಾನ ಕೈ ಬಿಡಬೇಕು : ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯವರು ನೋಟಾ ಅಭಿಯಾನವನ್ನು ಕೈ ಬಿಡಬೇಕೆಂದು ನಾವು ವಿನಂತಿ ಮಾಡುತ್ತಿರುವುದಾಗಿ ಪತ್ರಕರ್ತರ ಪ್ರಶ್ನೆಗೆ ಎಂ. ವೆಂಕಪ್ಪ ಗೌಡರು ಉತ್ತರಿಸಿದರು.
೨೦೧೨ರಲ್ಲಿ ಘಟನೆ ನಡೆದಾಗ ರಾಜ್ಯದಲ್ಲಿ ಬಿಜೆಪಿ ಸರಕಾರ ಇತ್ತು. ಅವರು ಸಮರ್ಪಕ ತನಿಖೆ ನಡೆಸಬೇಕಿತ್ತು. ನಮ್ಮ ಸರಕಾರ ಬಂದ ಬಳಿಕ ಸಿಬಿಐ ಗೆ ಆ ಕೇಸನ್ನು ಕೊಡಲಾಯಿತು. ಸೌಜನ್ಯ ಹೋರಾಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಲ್ಲ ಕಡೆಯಲ್ಲಿಯೂ ಇದ್ದರು. ನ್ಯಾಯಕ್ಕಾಗಿ ಏನು ಸಾಧ್ಯವೋ ಅದನ್ನು ನಮ್ಮ ಕಡೆಯಿಂದ ಮಾಡಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ಶಶಿಧರ್, ಸಾಮಾಜಿಕ ಜಾಲತಾಣದ ಸಂಯೋಜಕರಾದ ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ ದ್ದರು.