ಡಿ. 7ರಂದು ಮುಂಬೈಯ ಕುರ್ಲದಲ್ಲಿ ನಡೆಯಲಿರುವ ವಿಶ್ವ ಬಂಟರ ಸಮಾವೇಶ -2024 ರಲ್ಲಿ ಸಮಾಜ ಸೇವೆಗಾಗಿ ಕೆ. ಸೀತಾರಾಮ ರೈ ಸವಣೂರುರವರಿಗೆ ಸನ್ಮಾನ ನಡೆಯಲಿದೆ.
ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 12 ಸಾಧಕರನ್ನು ಗುರುತಿಸಿ ಗೌರವಿಸಲು ನಿರ್ಧರಿಸಲಾಗಿದ್ದು, ಈ ಪಟ್ಟಿಯಲ್ಲಿ ಸೀತಾರಾಮ ರೈಯವರ ಹೆಸರಿದೆ. ಅವರನ್ನು ಸಮಾಜ ಸೇವೆಯ ನೆಲೆಯಲ್ಲಿ ಗೌರವಿಸಲಾಗುವುದು.
ಜಿಲ್ಲೆಯಾದ್ಯಂತ ಸುಮಾರು 14 ಶಾಖೆಗಳನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ, ಜಿಲ್ಲೆಯ ವಿವಿಧ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಲಕ್ಷಾಂತರ ರೂ.ಗಳ ವಿದ್ಯಾನಿಧಿಯನ್ನು ನೀಡಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಸೀತಾರಾಮ ರೈಯವರು ಸವಣೂರಿನಲ್ಲಿ ಸ್ಥಾಪಿಸಿರುವ ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇದರೊಂದಿಗೆ ಹತ್ತು ಹಲವು ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಈ ಸನ್ಮಾನ ನಡೆಯಲಿದೆ.