1837 ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ ಸುಳ್ಯದಲ್ಲಿ ಸ್ಮಾರಕ ನಿರ್ಮಾಣಕ್ಕೆ ಆಗ್ರಹ

0

ಏಪ್ರಿಲ್ 5 ರ ಒಳಗೆ ಸಂಬಂಧಪಟ್ಟ ಇಲಾಖೆಯವರು ಕ್ರಮವಹಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ಸಾಮಾಜಿಕ ಹೋರಾಟಗಾರ ಗೋಪಾಲ ಪೆರಾಜೆಯವರಿಂದ ಪತ್ರಿಕಾಗೋಷ್ಠಿ

1837 ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಅನೇಕ ಮಂದಿ ಜೀವದಾನ ಮಾಡಿದ ಮಣ್ಣು ಸುಳ್ಯದ ಮಣ್ಣಾಗಿದೆ. ಇಂತಹ ಚಾರಿತ್ರಿಕ ಸಂಗತಿಗೆ ಸಾಕ್ಷಿಯಾಗಿರುವ ಹೋರಾಟದ ಕೇಂದ್ರ ಸ್ಥಳವಾಗಿರುವ ಸುಳ್ಯದಲ್ಲಿ ಇದರ ನೆನಪಿಗಾಗಿ ಯಾವುದೇ ಸ್ಮಾರಕ ಇಲ್ಲದಿರುವುದು ಬೇಸರ ಮತ್ತು ಖೇಧಕರ ವಿಚಾರವಾಗಿದೆ. ಕೂಡಲೇ ಸಂಭಂದಪಟ್ಟ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಂದು ೧೯೩೭ ಎಪ್ರಿಲ್ ೫ ರಂದು ಮಂಗಳೂರಿನಲ್ಲಿ ಬ್ರಿಟಿಷರು ಧ್ವಜ ಇಳಿಸಿದರೋ ಅದೇ ದಿನವಾದ ಎಪ್ರಿಲ್ ೫ ೨೦೨೫ ರಂದು ಸುಳ್ಯದಲ್ಲಿ ವಿವಿಧ ಸಂಘ ಸಂಸ್ಥೆ ಗಳ ಸಹಕಾರ ಪಡೆದು ಪ್ರತಿಭಟನೆ ಹಮ್ಮಿ ಕೊಳ್ಳು ವುದಾಗಿ ಸಾಮಾಜಿಕ ಹೋರಾಟಗಾರ ಗೋಪಾಲ ಪೆರಾಜೆಯವರು ಎಚ್ಚರಿಕೆ ನೀಡಿದ್ದಾರೆ.

ಮಾ ೨೨ ರಂದು ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿರುವ ಅವರು ೧೯೯೭ರಿಂದಲೂ ಈ ಕುರಿತಾಗಿ ಹಿಂದಿನ ಸರಕಾರದ ಮುಖ್ಯ ಮಂತ್ರಿಗಳಿಗೆ ಸಂಸ್ಕೃತಿ ಸಚಿವರುಗಳಿಗೆ ಸುಳ್ಯ ತಾಲೂಕಿನ ವಿಧಾನಸಭಾ ಸದಸ್ಯರುಗಳಿಗೆ, ಜಿಲ್ಲಾಧಿಕಾರಿಗಳಿಗೆ, ವಿವಿಧ ರಾಜಕೀಯ ಮುಖಂಡರಿಗೆ ಪತ್ರಗಳನ್ನು ಬರೆದು ಮನವಿ ಮಾಡುತ್ತಾ ಬಂದಿದ್ದೇವೆ. ಆದರೆ ಈವರೆಗೂ ಪತ್ರಗಳಿಗೆ ಹಿಂಪತ್ರ ಬಂದಿರುವುದು ಮಾತ್ರ ಸಾಧನೆಯಾಗಿದ್ದು ತಕ್ಷಣ ಸರಕಾರ ಈ ಕುರಿತಾಗಿ ಕ್ರಮ ಕೈಗೊಳ್ಳಬೇಕು.

ಈಗಾಗಲೇ ಈ ಕುರಿತಾಗಿ ರೂ. ೩೦ಲಕ್ಷದಷ್ಟು ಹಣ ಬಂದಿದ್ದು, ಅದು ಲೋಕೋಪಯೋಗಿ ಇಲಾಖೆ ಸುಳ್ಯ ಇದರ ಸುಪರ್ದಿಯಲ್ಲಿರುವ ವಿಚಾರ ತಿಳಿದು ಬಂದಿದೆ. ಒಂದು ವರ್ಷದಿಂದ ಹಣ ಅದರ ಖಾತೆಯಲ್ಲಿದ್ದು ಕಂದಾಯ ಇಲಾಖೆ ಸೂಕ್ತ ಜಾಗ ನಿರ್ಧರಿಸದ ಕಾರಣ ಇದು ನೆನೆಗುದಿಗೆ ಬಿದ್ದಿದೆ.

ಈ ಕುರಿತಾಗಿ ದಿನಾಂಕ ೦೫-೦೪-೨೦೨೫ರ ಒಳಗೆ (ಮಂಗಳೂರಲ್ಲಿ ಬ್ರಿಟಿಷ್ ಧ್ವಜ ಇಳಿಸಿದ ದಿನ ೦೫-೦೪-೧೯೩೭) ಸುಳ್ಯ ತಾಲೂಕು ಆಡಳಿತ ಕ್ರಮ ಕೈಗೊಳ್ಳದಿದ್ದರೆ ಸುಳ್ಯದ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರ ನೆರವಿನಿಂದ ತಾಲೂಕು ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಅಮರ ಸುಳ್ಯದ ಸ್ವಾತಂತ್ರ್ಯ ಸಮರ, ಕೆನರಾ ಬಂಡಾಯ, ಅಥವಾ ಕೊಡಗು -ಕೆನರಾ ರೈ ಬಂಡಾಯ ಸುಳ್ಯದ ಚರಿತ್ರೆಯಲ್ಲಿ ದಾಖಲಾಗಿರುವ ಸುಳ್ಯದ ಜನತೆಯ ಹೆಮ್ಮೆಯ ಸಂಗತಿ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಮರಕ್ಕೂ ಮೊದಲು ಅಂದರೆ ೧೮೩೭ರಲ್ಲಿ ಅದು ಘಟಿಸಿತು. ಅಂದಿನ ಕೊಡಗಿನಿಂದ ಶುರುವಾಗಿ ಮಂಗಳೂರಿನ ಬಾವುಟ ಗುಡ್ಡದಲ್ಲಿ ಹಾರಾಡುತ್ತಿದ್ದ ಬ್ರಿಟಿಷ್ ಕಂಪೆನಿ ಧ್ವಜವನ್ನು ಕೆಳಗಿಳಿಸಿ ಕೊಡಗಿನ ಹಾಲೇರಿ ವಂಶದ ಬಾವುಟವನ್ನು ಹಾರಿಸಲಾಗಿತ್ತು.

ಅದೊಂದು ಕೊಡಗು ಮತ್ತು ಅವಿಭಜಿತ ದಕ್ಷಿಣ ಕನ್ನಡದ ಜನರು ಬ್ರಿಟಿಷರ ವಿರುದ್ಧ ನಡೆಸಿದ ಸಾಮೂಹಿಕ ಹೋರಾಟ, ಹೋರಾಟದಲ್ಲಿ ಪಾಲ್ಗೊಂಡ ನೂರಾರು ಜನ ಶಿಕ್ಷೆ ಅನುಭವಿಸಿದರು. ಕೆಲವರು ಜೈಲುಗಳಲ್ಲೇ ಪ್ರಾಣ ಬಿಟ್ಟರು ಹೋರಾಟದ ನೇತೃತ್ವ ವಹಿಸಿದ್ದ ಹಲವು ನಾಯಕರನ್ನು ಸಿಂಗಾಪುರ ಬರ್ಮಗಳಿಗೆ ಅಂದರೆ ದೇಶಾಂತರ ಶಿಕ್ಷೆಗೆ ಗಡಿಪಾರಿಗೆ ಬ್ರಿಟಿಷ್ ಆಡಳಿತ ಒಳಪಡಿಸಿತ್ತು. ಯುದ್ಧದಲ್ಲಿ ಪಾಲ್ಗೊಂಡ ನಾಲ್ವರು ಗಲ್ಲಿಗೇರಿಸಲ್ಪಟ್ಟರು.
ಅವರಲ್ಲಿ ಮುಖ್ಯವಾಗಿ ಲಕ್ಷ್ಮಪ್ಪ ಬಂಗರಸ, ೧೯೩೭ಮೇ ೨೩. ಉಪ್ಪಿನಂಗಡಿ ಮಂಜ ಮೇ ೩೦, ಪುಟ್ಟ ಬಸಪ್ಪ ಜೂನ್ ೧೯ ರಂದು ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು.

ಅವರ ದೇಹಗಳನ್ನು ಸಾರ್ವಜನಿಕವಾಗಿ ಮರಗಳಿಗೆ ನೇತು ಹಾಕಲಾಗಿತ್ತು. ಅಪ್ಪಯ್ಯ ಗೌಡರನ್ನು ಅಕ್ಟೋಬರ್ ೩೧ರಂದು ಮಡಿಕೇರಿ ಕೋಟೆಯೊಳಗೆ ಅವರ ಹೆಂಡತಿ ಮತ್ತು ಕುಟುಂಬಸ್ಥರು ಸೇರಿದಂತೆ ಸಾರ್ವಜನಿಕವಾಗಿ ಗಲ್ಲುಗಂಭಕ್ಕೆ ಏರಿಸಿದರು.

ಈ ಹೋರಾಟದ ಫಲವಾಗಿ ಸುಳ್ಯ-ಕೊಡಗು ಭಾಗದ ಅನೇಕ ಮನೆತನಗಳು ತಮ್ಮ ಜಮೀನು ಸೇರಿದಂತೆ ಆರ್ಥಿಕ ನೆಲೆಗಳನ್ನು ಕಳೆದುಕೊಂಡರು. ಶತಮಾನದ ತನಕ ಈ ಪರಿಸ್ಥಿತಿ ಮುಂದುವರೆಯಿತು.ಮೊದ ಮೊದಲು ಕೊಡಗಿನಲ್ಲಿ ಆರಂಭವಾಗಿದ್ದ ಈ ಹೋರಾಟದ ಕೇಂದ್ರ ಭಾಗ ಸುಳ್ಯ ತಾಲೂಕಿನ ಉಬರಡ್ಕ ಗ್ರಾಮವಾಗಿತ್ತು.

೧೮೩೭ ಮಾರ್ಚ್ ೩೦ರಂದು ಪ್ರಾರಂಭಗೊಂಡ ಈ ಹೋರಾಟ ಮೊದಲಿಗೆ ಬ್ರಿಟೀಷ್ ಖಜಾನೆಯಾಗಿದ್ದ ಬೆಳ್ಳಾರೆ ಕೋಟೆಯನ್ನು ವಶಪಡಿಸಿಕೊಂಡಿದೆ.
ಈ ರೀತಿ ನಾನಾ ಇತಿಹಾಸ ಹೊಂದಿರುವ ಸುಳ್ಯದ ಮಣ್ಣಿನ ತಾಲೂಕು ಕಚೇರಿ ಮುಂಭಾಗ, ಉಬರಡ್ಕ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ, ಸುಳ್ಯ ಜ್ಯೋತಿ ಸರ್ಕಲ್ ಬಳಿ, ಅಥವಾ ಸುಳ್ಯ ಜೂನಿಯರ್ ಕಾಲೇಜ್ ಬಳಿ ಈ ನಾಲ್ಕು ಕಡೆಯ ಯಾವುದಾದರೂ ಒಂದು ಕಡೆ ಕೂಡಲೇ ಸ್ಮಾರಕ ನಿರ್ಮಾಣ ಮಾಡಬೇಕೆಂದು ಅವರು ಪತ್ರಿಕಾಗೋಷ್ಠಿ ಮೂಲಕ ಅಗ್ರಹಿಸಿದರು.

ಈ ಸಂಧರ್ಭದಲ್ಲಿ ಸಂಘಟನೆಯ ಮುಖಂಡರು ಗಳಾದ ದಿವಾಕರ್ ಪೈ, ಕರುಣಾಕರ ಪಲ್ಲತ್ತಡ್ಕ ಉಪಸ್ಥಿತರಿದ್ದರು.